ಉಡುಪಿಯಲ್ಲಿ ಪ್ರವಾಹ ಹಿನ್ನೆಲೆ: ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸಂಸದೆ ಶೋಭಾ ಸೂಚನೆ

ಉಡುಪಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯಾದ್ಯಂತ ಹಲವಾರು ತಗ್ಗು ಪ್ರದೇಶಗಳಲ್ಲಿ ಮನೆಗಳು ಆಸ್ತಿ-ಪಾಸ್ತಿ ಮುಳುಗಡೆಯಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಂಸದೆ ಶೋಭಾ ಕರಂದ್ಲಾಜೆಯವರು ಚರ್ಚಿಸಿ ಅಗತ್ಯದ ಪರಿಹಾರ ಕಾರ್ಯಗಳನ್ನು ತಕ್ಷಣ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಉಡುಪಿಯಲ್ಲಿ ಪ್ರವಾಹದ ಭೀತಿ ಇರುವ ಕಾರಣದಿಂದ ಇನ್ನು ಹೆಚ್ಚಿನ ವಿಪತ್ತು ಪರಿಹಾರ ಕಾರ್ಯಪಡೆಯನ್ನು ಕಳಿಸಿಕೊಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ಟಿ. ಎಂ ವಿಜಯ ಭಾಸ್ಕರ್ ಅವರೊಂದಿಗೆ ಸಂಸದೆ ಶೋಭಾ ಕರಂದ್ಲಾಜೆಯವರು ಮನವಿಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಈಗಾಗಲೇ ಮಂಗಳೂರಿನಿಂದ ಒಂದು NDRF ತಂಡವನ್ನು ಕಳುಹಿಸಿ ಕೊಟ್ಟಿರುತ್ತಾರೆ. ಈ ತಂಡ ಅಪಾಯದ ಪ್ರದೇಶದಲ್ಲಿರುವ ಜನರ ಸಹಾಯ ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

ಇನ್ನೊಂದು 20 ಜನರನ್ನೊಳಗೊಂಡ NDRF ತಂಡವನ್ನು ಮೈಸೂರಿನಿಂದ ಈಗಾಗಲೇ ಕಳುಹಿಸಿಕೊಡಲಾಗಿದೆ ಹಾಗೂ ಸಂಸದರ ಬೇಡಿಕೆಯ ಮೇರೆಗೆ ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್ ಗಳು ಕೂಡಾ ಕೆಲವೇ ಗಂಟೆಗಳಲ್ಲಿ ಕಳುಹಿಸಿಕೊಡಲಾಗುತ್ತಿದೆ. ಬೆಂಗಳೂರು ಹಾಗೂ ಕಾರವಾರ ಕೇಂದ್ರದಿಂದ ಹೆಲಿಕಾಪ್ಟರ್ ಗಳನ್ನು ರಕ್ಷಣಾ ಕಾರ್ಯಕ್ಕಾಗಿ ಕಳುಹಿಸಿ ಕಳುಹಿಸಿಕೊಡುವುದಾಗಿ ಮುಖ್ಯ ಕಾರ್ಯದರ್ಶಿ ಭರವಸೆ ನೀಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಈ ಹೆಲಿಕಾಪ್ಟರ್ ಗಳು ಕೆಲವೇ ಗಂಟೆಗಳಲ್ಲಿ ಉಡುಪಿಯಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ಭಾಗಿಯಗಲಿವೆ ಎಂದು ಹೇಳಿದ್ದಾರೆ.