ಉಳ್ಳಾಲ: ಮೀನುಗಾರಿಕಾ ಬೋಟ್ ಮುಳುಗಡೆ; ಐವರು ಮೀನುಗಾರರು ಪ್ರಾಣಾಪಯದಿಂದ ಪಾರು

ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಶುಕ್ರವಾರ ಮುಂಜಾನೆ ಮಂಗಳೂರಿನ ಉಳ್ಳಾಲ ಸಮುದ್ರ ಮಧ್ಯೆ ಮುಳುಗಡೆಯಾಗಿದೆ. ಆದರೆ ಬೋಟ್‌ನಲ್ಲಿದ್ದ ಐವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಳ್ಳಾಲ ನಿವಾಸಿ ನಯನಾ ಪಿ.ಸುವರ್ಣ ಅವರ ಮಾಲಕತ್ವದ ‘ನವಾಮಿ ಶಿವಾನಿ’ ಹೆಸರಿನ ಟ್ರಾಲ್ ಬೋಟ್ ನಲ್ಲಿ ಪ್ರವೀಣ್ ಸುವರ್ಣ ಸೇರಿದಂತೆ ಉತ್ತರ ಪ್ರದೇಶದ ಐವರು ಮೀನುಗಾರರು ಗುರುವಾರ ಸಂಜೆ ಟ್ರಾಲ್ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮುಗಿಸಿ ಶುಕ್ರವಾರ ನಸುಕಿನ ಜಾವ ನಾಲ್ಕು ಗಂಟೆಗೆ ವಾಪಸಾಗುತ್ತಿದ್ದಾಗ ಉಳ್ಳಾಲ ಸಮುದ್ರದಲ್ಲಿ ಬೋಟ್ ಕಲ್ಲೊಂದಕ್ಕೆ ಡಿಕ್ಕಿಯಾದ ಪರಿಣಾಮ ಬೋಟ್ ಮುಳುಗಡೆಯಾಗಿದೆ ಎನ್ನಲಾಗಿದೆ.

ವಿಷಯ ತಿಳಿದ ತಕ್ಷಣ ಸ್ಥಳೀಯ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‌ನ ಮೀನುಗಾರರು ಬೋಟ್‌ನಲ್ಲಿದ್ದ ಐವರನ್ನು ರಕ್ಷಿಸಿದ್ದಾರೆ. ಮುಳುಗಡೆಯಾಗಿರುವ ಬೋಟ್‌ನಲ್ಲಿ ಮೀನು, ಬಲೆ ಸಮುದ್ರ ಪಾಲಾಗಿದ್ದು, ಲಕ್ಷಾಂತರ ಮೌಲ್ಯದ ಬೋಟ್‌ಗೆ ಹಾನಿಯಾಗಿದೆ.