ಕೋವಿಡ್ ಪರಿಹಾರ ಪ್ಯಾಕೇಜ್ ನಲ್ಲಿ ಮೀನುಗಾರರ ಕಡೆಗಣನೆ: ರಾಜ್ಯ ಬಿಜೆಪಿ ಸರಕಾರದಿಂದ ಮೀನುಗಾರರಿಗೆ ಮಹಾದ್ರೋಹ; ರಮೇಶ್ ಕಾಂಚನ್

ಉಡುಪಿ: ಕರಾವಳಿ ಭಾಗದ ಮೀನುಗಾರರನ್ನು ಪ್ರತಿ ಚುನಾವಣೆಯಲ್ಲಿ ತನ್ನ ಮತ ಬ್ಯಾಂಕ್ ನಂತೆ ಬಳಸಿಕೊಳ್ಳುವ ರಾಜ್ಯ ಬಿಜೆಪಿ ಸರ್ಕಾರವು ಇದೀಗ ಕೊರೊನಾ ಸಂಕಷ್ಟ ಕಾಲದಲ್ಲಿ ಮೀನುಗಾರರನ್ನು ಮರೆತುಬಿಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಉಡುಪಿ ನಗರಸಭಾ ಪ್ರತಿಪಕ್ಷದ ನಾಯಕರಾದ ರಮೇಶ್ ಕಾಂಚನ್ ಹೇಳಿದ್ದಾರೆ.

ಕೋವಿಡ್ ಲಾಕ್ ಡೌನ್ ನಿಂದ ರಾಜ್ಯದ ಎಲ್ಲಾ ಜನರಂತೆ ಮೀನುಗಾರರು ಕೂಡ ಬಹಳಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ಮತ್ಸ್ಯ ಕ್ಷಾಮದಿಂದ ಮೀನುಗಾರರು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇದೀಗ ರಾಜ್ಯ ಸರ್ಕಾರ ಘೋಷಿಸಿರುವ ವಿಶೇಷ ಲಾಕ್ ಡೌನ್ ಪರಿಹಾರ ಪ್ಯಾಕೇಜ್ ನಲ್ಲಿ ಮೀನುಗಾರರನ್ನು ಕೈಬಿಟ್ಟಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಾವಳಿ ಜಿಲ್ಲೆಯ ಮೂರು ಸಂಸದರು, ದಕ್ಷಿಣ ಕನ್ನಡ ಹಾಗೂ ಉಡುಪಿ ಉಭಯ ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸುವಲ್ಲಿ ಮೀನುಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೂ ಇಂತಹ ಕಠಿಣ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡದೆ ಬಿಜೆಪಿ ಸರಕಾರ ಮಹಾದ್ರೋಹ ಎಸಗಿದೆ ಎಂದು ಟೀಕಿಸಿದ್ದಾರೆ.

ಕೇಂದ್ರಕ್ಕೆ 25 ಬಿಜೆಪಿ ಸಂಸದರನ್ನು ಗೆಲ್ಲಿಸಿ ಕಳಿಸಿದರೂ ರಾಜ್ಯಕ್ಕೆ ನಿರಂತರ ಮಲತಾಯಿ ಧೋರಣೆ ಮಾಡುತ್ತಿರುವ ಕೇಂದ್ರ ಬಿಜೆಪಿ ಸರಕಾರ. ಮೊನ್ನೆ ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಕಷ್ಟು ನಷ್ಟವನ್ನು ಉಂಟು ಮಾಡಿರುವ ಚಂಡಮಾರುತವು ಬೇರೆ ರಾಜ್ಯಗಳಲ್ಲೂ ಹಾನಿ ಮಾಡಿರುತ್ತೆ. ಆದರೆ ದೇಶದ ಪ್ರಧಾನಿಯವರು ಕೇವಲ ಗುಜರಾತ್ ರಾಜ್ಯಕ್ಕೆ ಸಾವಿರ ಕೋಟಿ ಪರಿಹಾರ ಘೋಷಿಸಿರುವುದು ಖೇದಕರ ವಿಷಯ. ಕರಾವಳಿ ಭಾಗಕ್ಕೆ ಚಂಡಮಾರುತದಿಂದ ಆದ ನಷ್ಟವನ್ನು ವೀಕ್ಷಿಸಲು ಬಂದ ಸಚಿವರಾದ ಆರ್. ಅಶೋಕ್ ಅವರು ಜನರ ಕಷ್ಟವನ್ನು ಆಲಿಸುವಲ್ಲಿ ವಿಫಲರಾಗಿದ್ದು, ಕೇವಲ ಕಾಟಚಾರದ ಭೇಟಿ ಮಾಡಿದ್ದಾರೆ ಎಂದು ದೂರಿದ್ದಾರೆ.

ನಮ್ಮ ಜಿಲ್ಲೆಯ ಜನಪ್ರತಿನಿಧಿನಗಳು ಈ ತಾರತಮ್ಯವನ್ನು ಪ್ರಶ್ನಿಸದೆ ವಿಷಯಾಂತರ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕರಾವಳಿಯ ಜನರು ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ರಮೇಶ್ ಕಾಂಚನ್ ತಿಳಿಸಿದ್ದಾರೆ.