ಸಚಿವ ಅಂಗಾರ ನೇತೃತ್ವದಲ್ಲಿ ಉತ್ತರ ಕನ್ನಡ ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಸಮಸ್ಯೆಗಳ ಬಗ್ಗೆ ವಿಧಾನಸೌದದಲ್ಲಿ ಮೀನುಗಾರಿಕಾ ಸಚಿವ ಎಸ್.ಅಂಗಾರ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು, ಅಧಿಕಾರಿಗಳು ಮತ್ತು ಮೀನುಗಾರರೊಂದಿಗೆ ಗುರುವಾರದಂದು ಸುಧೀರ್ಘ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಆಳಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಯಾಂತ್ರಿಕ ದೋಣಿಗಳ ಬೇಡಿಕೆ ಇದ್ದು, 2022-23 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ಅರ್ಜಿ ಸಲ್ಲಿಸಿದ ಮೀನುಗಾರರಿಗೆ ಹಣ ಮಂಜೂರು ಮಾಡಬೇಕೆಂಬ ಪ್ರಸ್ತಾಪದ ಬಗ್ಗೆ ಉತ್ತರಿಸಿದ ಸಚಿವ ಅಂಗಾರ, ಇಲಾಖೆಯ ಮಾರ್ಗಸೂಚಿಯಂತೆ ಆಳ ಸಮುದ್ರದ ಮೀನುಗಾರಿಕೆಯ ದೋಣಿಗಳು ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಬೇಡಿಕೆಯನ್ನು ಅವಲಂಬಿಸಿ ಕೇಂದ್ರ ಸರ್ಕಾರದ ಅನುಮತಿ ಪಡೆದು ಪರ್ಸಿನ್ ಬೋಟ್‌ಗಳ ವಿತರಣೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮುಂದುವರೆದು, ಕಳೆದ ವರ್ಷದ ಬಜೆಟ್‌ನಲ್ಲಿ 4000 ಮೀನುಗಾರಿಕಾ ಮನೆಗಳ ಮಂಜೂರಾತಿ ಪಡೆದಿದ್ದು, ವಸತಿ ರಹಿತ ಮೀನುಗಾರರ ಮನೆಗಳಿಗಾಗಿ ಬೇಡಿಕೆ ಸಲ್ಲಿಸಿದಂತೆಯೇ ಪ್ರತಿ ಕ್ಷೇತ್ರಗಳಿಗೆ ಕೊಟ್ಟಿರುವ ಮನೆಗಳನ್ನು ಅವಲಂಬಿಸಿ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಿಗೆ ಹೆಚ್ಚು ಮನೆಗಳ ಮಂಜೂರಾತಿ ಮಾಡುವುದಾಗಿ ಉತ್ತರ ಕನ್ನಡದ ಜಿಲ್ಲೆಯ ಮೀನುಗಾರರ ನಿಯೋಗಕ್ಕೆ ಆಶ್ವಾಸನೆ ನೀಡಿದರು.

ನಾಡದೋಣಿಯ ಸೀಮೆ ಎಣ್ಣೆ ಬಗ್ಗೆ ಚರ್ಚೆ ನಡೆಸಿ 3 ಲಕ್ಷ ಕಿಲೋ ಲೀಟರ್ ಸೀಮೆ ಎಣ್ಣೆಯನ್ನು ತುರ್ತಾಗಿ ಹಂಚುವ ಕ್ರಮ ಕೈಗೊಂಡಿದ್ದು, ಹೆಚ್ಚಿನ ಬೇಡಿಕೆಗಾಗಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸಲಾಗುವುದು ಮತ್ತು ಅತಿ ಶೀಘ್ರದಲ್ಲೇ ಈ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.

ಈಗಾಗಲೇ ಉತ್ತರ ಕನ್ನಡದ ಭಟ್ಕಳವೂ ಸೇರಿದಂತೆ ಕೆಲವು ಭಾಗಗಳಲ್ಲಿ ಹೂಳೆತ್ತುವ ಕಾಮಗಾರಿಗೆ ಟೆಂಡರ್ ನೀಡಿದ್ದು ಇನ್ನು ಹದಿನೈದು ದಿನಗಳಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕಾ ಅಭಿವೃದ್ಧಿ ಬಗ್ಗೆ ಮೀನುಗಾರಿಕಾ ನಿಯೋಗದ ಮುಖಂಡ ಹುವಾ ಖಂಡೇಕರ್ ಅವರ ನೇತೃತ್ವದ ತಂಡದೊಂದಿಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ, ವೇದವ್ಯಾಸ ಕಾಮತ್, ಗಣಪತಿ ಉಳ್ವೇಕರ್, ರವಿ ಕುಮಾರ್, ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಾಚಾರಿ ಹಾಗೂ ತಂಡ, ಬಂದರು ಇಲಾಖೆಯ ರಾಥೋಡ್ ಹಾಗೂ ಇತರರು ಉಪಸ್ಥಿತರಿದ್ದರು.