ನವದೆಹಲಿ: ಸ್ವತಂತ್ರ ಭಾರತದ ಪ್ರಥಮ ಮತದಾರ ಶ್ಯಾಮ್ ಸರನ್ ನೇಗಿ ಶನಿವಾರ ಬೆಳಿಗ್ಗೆ ತಮ್ಮ 106 ನೇ ವಯಸ್ಸಿನಲ್ಲಿ ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ದೇಶದ ಮೊದಲ ಚುನಾವಣೆಯಿಂದ ಪ್ರಸಕ್ತ ಚುನಾವಣೆವರೆಗೆ ಎಲ್ಲ ಚುನಾವಣೆಗಳಲ್ಲೂ ನೇಗಿ ಮತ ಚಲಾಯಿಸಿದ್ದಾರೆ. 106 ನೇ ವಯಸ್ಸಿನಲ್ಲಿಯೂ ಅವರು ಮತ ಚಲಾಯಿಸುವುದನ್ನು ಬಿಟ್ಟಿರಲಿಲ್ಲ. ನವೆಂಬರ್ 2 ರಂದು 34 ನೇ ಬಾರಿಗೆ ವಿಧಾನಸಭಾ ಚುನಾವಣೆಗೆ ಅಂಚೆ ಮತ ಚಲಾಯಿಸಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ, ಶ್ಯಾಮ್ ಸರಣ್ ನೇಗಿ ಅವರು ರಾಜ್ಯದ ವಿಧಾನಸಭಾ ಚುನಾವಣೆಗೆ ಅಂಚೆ ಮತಪತ್ರದ ಮೂಲಕ ತಮ್ಮ ಅಂತಿಮ ಮತ ಚಲಾಯಿಸಿದ್ದಾರೆ. ಇದಕ್ಕಾಗಿ ಕಿನ್ನೌರ್ ಜಿಲ್ಲಾಧಿಕಾರಿ ಅವರ ನಿವಾಸದಲ್ಲಿ ನೇಗಿ ಅವರನ್ನು ಸನ್ಮಾನಿಸಲಾಗಿತ್ತು. ಚುನಾವಣಾ ಆಯೋಗ ಕೂಡಾ ನೇಗಿ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ ಮತ್ತು ಅವರನ್ನು “ಪ್ರಜಾಪ್ರಭುತ್ವದಲ್ಲಿ ಅಸಾಧಾರಣ ನಂಬಿಕೆ ಹೊಂದಿರುವ ವ್ಯಕ್ತಿ” ಎಂದು ಬಣ್ಣಿಸಿದೆ.
ಶ್ಯಾಮ್ ಸರನ್ ನೇಗಿ ಹಲವಾರು ವ್ಯಕ್ತಿಗಳಿಗೆ ಸ್ಪೂರ್ತಿಯಾಗಿದ್ದರು ಎಂದು ಬಣ್ಣಿಸಿರುವ ದೇಶದ ಗಣ್ಯಾತಿಗಣ್ಯರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.