ಮೊದಲ ಏಕದಿನ ಪಂದ್ಯ: ಇಂಗ್ಲೆಂಡ್ ಗೆ 318 ರನ್‌ ಗುರಿ ನೀಡಿದ ಭಾರತ

ಪುಣೆ: ಕನ್ನಡಿಗ ಕೆ.ಎಲ್.‌ ರಾಹುಲ್‌ ಮತ್ತು ಪದಾರ್ಪಣೆ ಪಂದ್ಯವಾಡುತ್ತಿರುವ ಕೃಣಾಲ್‌ ಪಾಂಡ್ಯ ಅವರು ಕೊನೆಯ ಹಂತದಲ್ಲಿ ತೋರಿದ ಬ್ಯಾಟಿಂಗ್ ಪ್ರದರ್ಶನದಿಂದ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 318 ರನ್‌ ಪೇರಿಸಿತು.

ಆರಂಭಿಕರಾದ ಉಪನಾಯಕ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 15.1 ಓವರ್‌ಗಳಲ್ಲಿ 64 ರನ್‌ಗಳ ಜೊತೆಯಾಟವಾಡಿತು.
ರೋಹಿತ್‌ (28) ವಿಕೆಟ್‌ ಪತನದ ಬಳಿಕ ಕ್ರೀಸ್‌ಗೆ ಬಂದ ನಾಯಕ ವಿರಾಟ್‌ ಕೊಹ್ಲಿ (56) ಶಿಖರ್‌ ಜೊತೆಗೂಡಿ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 105 ರನ್‌ ಸೇರಿಸಿದರು.

106 ಎಸೆತಗಳನ್ನು ಎದುರಿಸಿದ ಧವನ್‌, 98 ರನ್‌ ಗಳಿಸಿದ್ದಾಗ ಬೆನ್‌ ಸ್ಟೋಕ್ಸ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿ ಶತಕದಿಂದ ವಂಚಿತರಾದರು.
ಟಿ20 ಶೈಲಿಯಲ್ಲಿ ಬ್ಯಾಟಿಂಗ್‌ ಮಾಡಿದ ಕೆ.ಎಲ್ ರಾಹುಲ್ ಹಾಗೂ ಕೃಣಾಲ್ ಪಾಂಡ್ಯ ಜೋಡಿ ಮುರಿಯದ 6ನೇ ವಿಕೆಟ್‌ ಪಾಲುದಾರಿಕೆಯಲ್ಲಿ ಕೇವಲ 57 ಎಸೆತಗಳಲ್ಲಿ 112 ರನ್‌ ಗಳಿಸಿತು.

ರಾಹುಲ್‌ 43 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್‌ ಮತ್ತು ಬೌಂಡರಿ ಸಹಿತ 62 ರನ್‌ ಗಳಿಸಿದರೆ, ಆರಂಭದಿಂದಲೂ ಬಿರುಸಾಗಿ ಬ್ಯಾಟ್‌ ಬೀಸಿದ ಕೃಣಾಲ್‌ 31 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು 7 ಬೌಂಡರಿ ಸಹಿತ 58 ಚಚ್ಚಿದರು. ಇಂಗ್ಲೆಂಡ್‌ ಪರ ಬೆನ್ಸ್‌ ಸ್ಟೋಕ್ಸ್‌ ಮೂರು, ಮಾರ್ಕ್‌ ವುಡ್‌ ಎರಡು ವಿಕೆಟ್‌ ಕಬಳಿಸಿದರು.