ಬೆಂಗಳೂರು: ಬಿ.ವೈ.ವಿಜಯೇಂದ್ರ ಭಾಜಪಾದ ರಾಜ್ಯಾಧ್ಯಕ್ಷ ಹುದ್ದೆಗೆ ನೇಮಕಗೊಂಡು ರಾಜ್ಯ ಪದಾಧಿಕಾರಿಗಳ ತಂಡ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಶನಿವಾರ ನಡೆಯಲಿದೆ.
ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುವ ಕಾರ್ಯಕಾರಿಣಿ ಸಭೆಯಲ್ಲಿ 900ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಲಿದ್ದಾರೆಂದು ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.
ಶುಕ್ರವಾರ ಕಾರ್ಯಾಕಾರಿಣಿ ನಡೆಯುವ ಸ್ಥಳದಲ್ಲಿನ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಚಟುವಟಿಕೆ ಜೊತೆಗೆ ಮುಂದಿನ ಕಾರ್ಯ ಯೋಜನೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದರು.
ರಾಜ್ಯದಲ್ಲಿರುವ ಬಡವರು, ರೈತರು ಮತ್ತು ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಗಳನ್ನು ಕೈಗೆತ್ತಿಕೊಳ್ಳಬೇಕು. ಬಡವರ ವಿರೋಧಿ ಸರ್ಕಾರದ ಬಗ್ಗೆ ಸತ್ಯಾಂಶಗಳನ್ನು ತಲುಪಿಸಬೇಕು.
ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಕಾರ್ಯಕ್ರಮಗಳಿಂದ ದೇಶಾದ್ಯಂತ ಜನತೆ ಮೋದಿಜೀ ಪರವಾಗಿದ್ದಾರೆ. ಕೇಂದ್ರದ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಉದ್ದೇಶಿಸಲಾಗಿದೆ. ಮೋದಿ ಅವರ ಜನಪ್ರಿಯತೆಯನ್ನು ಮತವನ್ನಾಗಿ ಪರಿವರ್ತಿಸಿ ಕರ್ನಾಟಕವು ದಕ್ಷಿಣ ಭಾರತ ಬಿಜೆಪಿ ಹೆಬ್ಬಾಗಿಲು ಎಂದು ಸಾಬೀತು ಪಡಿಸುತ್ತೇವೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದರು.
ಎಲ್ಲಾ ವಿಷಯಗಳ ಸಮಾಲೋಚನೆ ಮಾಡಿ, ಮುಂದಿನ ಲೋಕಸಭಾ ಚುನಾವಣೆಗೆ ಬೇಕಾದ ಕಾರ್ಯತಂತ್ರವನ್ನು ಹೆಣೆಯಲಾಗುವುದು. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಲಿದ್ದು, ಪಕ್ಷದ ಎಲ್ಲಾ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು ಭಾಗವಹಿಸುವರು. ಅವರ ಮಾರ್ಗದರ್ಶನದಲ್ಲಿ ಪಕ್ಷ ಮುನ್ನಡೆಸುವ ಕುರಿತು ಚರ್ಚಿಸುತ್ತೇವೆ ಎಂದರು.
28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುವ ಗುರಿ ಇದೆ. ರಾಜ್ಯದಾದ್ಯಂತ ನರೇಂದ್ರ ಮೋದಿಜೀ ಅವರ ಪರವಾದ ಅಲೆ ಇದೆ. ಹಾಗಾಗಿ ಈ ವಿಚಾರದಲ್ಲಿ ನನಗೆ ವಿಶ್ವಾಸ ಇದೆ. ಮೋದಿಜೀ ಅವರ ನಾಯಕತ್ವ ಮತ್ತು ಬಿಜೆಪಿ ತತ್ವ, ಸಿದ್ಧಾಂತ ಒಪ್ಪಿ ಬರುವ ಯಾವುದೇ ನಾಯಕರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ ಎಂದರು.
ಜಗದೀಶ್ ಶೆಟ್ಟರ್ ಅವರ ಮನಸ್ಸು ಬಿಜೆಪಿಯಲ್ಲೇ ಇತ್ತು. ಮೋದಿಜೀ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಅಪೇಕ್ಷೆಯೂ ಇತ್ತು. ಅಪೇಕ್ಷೆಗೆ ತಕ್ಕಂತೆ ಉತ್ತಮ ನಿರ್ಧಾರ ಮಾಡಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎಂಬ ಕುರಿತು ಕೇಂದ್ರದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ಅನುಗುಣವಾಗಿ ಈ ನಿರ್ಧಾರ ಇರಲಿದೆ ಎಂದರು.