ಬೆಂಗಳೂರಿಗೆ ಬಂತು ಮೊದಲ ಎಲೆಕ್ಟ್ರಿಕ್ ಬಸ್.!

ಬೆಂಗಳೂರು: ರಾಜ್ಯಕ್ಕೆ ಮೊದಲ ಎಲೆಕ್ಟ್ರಿಕ್ ಬಸ್ ಬೆಂಗಳೂರಿಗೆ ಬಂದಿದ್ದು, ಆ ಮೂಲಕ‌ ಬಿಎಂಟಿಸಿಯ ಬಹು ವರ್ಷಗಳ ಕನಸು ನನಸಾಗಿದೆ.
ಸಾರಿಗೆ ಸಚಿವ ಶ್ರೀರಾಮುಲು ಮೊದಲ ಎಲೆಕ್ಟ್ರಿಕ್ ಬಸ್ ​ಅನ್ನು ಅನಾವರಣ ಮಾಡಿದ್ದು, ಕೆಂಗೇರಿ ಡಿಪೋದಲ್ಲಿ ಮೊದಲ ವಿದ್ಯುತ್ ಚಾಲಿತ ಬಸ್ ಅನಾವರಣಗೊಂಡಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ 90 ಮಿನಿ ಬಸ್‌ಗಳನ್ನು ರಸ್ತೆಗೆ ಇಳಿಸಲು ಬಿಎಂಟಿಸಿ ಮುಂದಾಗಿದೆ. ಜೆಬಿಎಂ ಕಂಪನಿಯಿಂದ ಗುತ್ತಿಗೆ(ಜಿಸಿಸಿ) ಆಧಾರದಲ್ಲಿ ಬಸ್ ಪಡೆದುಕೊಳ್ಳಲಾಗುತ್ತಿದ್ದು, ಎನ್ ಟಿಪಿಸಿ ಸಹಯೋಗದಲ್ಲಿ ಸೇವೆ ಒದಗಿಸಲು ಒಪ್ಪಂದ ‌ಮಾಡಿಕೊಳ್ಳಲಾಗಿದೆ.

34 ಆಸನಗಳ ಈ ಬಸ್ ನಲ್ಲಿ ಎರಡು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಆರು ಬ್ಯಾಟರಿಗಳ ಸಹಾಯದಲ್ಲಿ ಬಸ್ ಸಂಚರಿಸಲಿದೆ. ಒಮ್ಮೆ ಚಾರ್ಜ್ ಮಾಡಿದರೆ 120 ಕಿಲೋ ಮೀಟರ್ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ನ.1ಕ್ಕೆ 10 ಬಸ್‌ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರ್ವಜನಿಕ ಸೇವೆಗೆ ಸಮರ್ಪಿಸುವರು.

ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲಾ 90 ಬಸ್‌ಗಳು ರಸ್ತೆಗೆ ಇಳಿಯಲಿವೆ. ಎರಡನೇ ಹಂತದಲ್ಲಿ 300 ಬಸ್‌ಗಳು ಇನ್ನು ಆರು ತಿಂಗಳಲ್ಲಿ ರಸ್ತೆಗೆ ಇಳಿಯಲಿವೆ ಎಂದು ಶ್ರೀರಾಮುಲು ತಿಳಿಸಿದರು.