ಕುಂದಾಪುರ: ಸರ್ಕಾರಿ ಭೂಮಿಯಲ್ಲಿ ಬೆಂಕಿ, ಸ್ಥಳೀಯ ಯುವಕರ ಸಮಯಪ್ರಜ್ಞೆಗೆ ತಪ್ಪಿತು ಭಾರೀ ದುರಂತ

ಕುಂದಾಪುರ: ಇಲ್ಲಿನ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ಸರ್ಕಾರಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹತ್ತಕ್ಕೂ ಅಧಿಕ ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ. ಬೆಂಕಿಗೆ ಕಾರಣ ಏನೆಂಬುವುದು ತಿಳಿದುಬಂದಿಲ್ಲ.

ಮುಳ್ಳಿಕಟ್ಟೆಯ ಕೊಪ್ಪರಿಗೆಯಲ್ಲಿರುವ ಸುಮಾರು ೨೦ ಎಕರೆ ಸರ್ಕಾರಿ ಭೂಮಿಯಲ್ಲಿ ೧೦ ಎಕರೆಯಷ್ಟು ಜಾಗ ಬೆಂಕಿಗಾಹುತಿಯಾಗಿದೆ. ಈ ಪ್ರದೇಶದಲ್ಲಿ ಗಾಳಿ ಮರಗಳು ಬೆಳೆದಿದ್ದು ಅದರ ಎಲೆಗಳು ಒಣಗಿ ಬಿದ್ದಿದ್ದವು. ಇದೇ ಎಲೆಗೆ ಬೆಂಕಿ ತಗುಲಿದ್ದು, ಬೆಂಕಿಯ ತೀವ್ರತೆ ವ್ಯಾಪಿಸಿದೆ ಎಂದು ಶಂಕಿಸಲಾಗಿದೆ. ಸಂಜೆ ಆರು ಗಂಟೆಯ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಬೆಂಕಿಯ ಕೆನ್ನಾಲಗೆ ವಿಸ್ತಾರವಾಗು ಉರಿಯುತ್ತಿರುವುದನ್ನು ನೋಡಿ ಎಚ್ಚೆತ್ತುಕೊಂಡ ಸ್ಥಳೀಯ ನಿವಾಸಿಗಳು ಹಾಗೂ ಯುವಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಬೆಂಕಿ ನಂದಿಸಲು ಮುಂದಾದರು.

ಏರುತಗ್ಗುಗಳಿಂದ ಕೂಡಿದ ಜಾಗವಾಗಿದ್ದರಿಂದ ಅಗ್ನಿಶಾಮಕ ದಳದ ಬಸ್ ಸ್ಥಳಕ್ಕೆ ಬರಲು ಸಾಧ್ಯವಾಗದಿದ್ದರಿಂದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯ ಯುವಕರು ಗಿಡಗಳನ್ನು ಬೆಂಕಿಗೆ ಬಡಿದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಸುಮಾರು ೯.೩೦ರ ತನಕವೂ ಕಾರ್ಯಾಚರಣೆ ನಡೆದಿದ್ದು, ಬಳಿಕ ಬಂಕಿಯನ್ನು ಹತೋಟಿಗೆ ತರಲಾಯಿತು.

ತಪ್ಪಿತು ಭಾರೀ ದುರಂತ: ಬೆಂಕಿ ನಂದಿಸಿದ ಯುವಕರು
ಕೊಪ್ಪರಿಗೆ ಸರ್ಕಾರಿ ಪ್ರದೇಶಕ್ಕೆ ತಾಗಿಕೊಂಡೇ ಸುಮಾರು ೨೦ಕ್ಕೂ ಅಧೀಕ ಮನೆಗಳಿದ್ದವು. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಸ್ಥಳೀಯ ನಿವಾಸಿಗಳು ಭಯಬೀತರಾಗಿದ್ದರು. ತಕ್ಷಣ ಕೆಲ ಸ್ಥಳೀಯ ಯುವಕರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.