ರೈಲಿನಲ್ಲಿ ಆಕಸ್ಮಿಕ ಬೆಂಕಿ: ಪ್ರಯಾಣಿಕರು ಅಪಾಯದಿಂದ ಪಾರು.

ಬೈಂದೂರು: ಮುಂಬಯಿನಿಂದ ಏರ್ನಾಕುಲಂಗೆ ತೆರಳುತ್ತಿದ್ದ ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ಬೈಂದೂರು ತಾಲೂಕಿನ ಕಂಬದಕೋಣೆ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಮುಂಬಯಿನಿಂದ ಎರ್ನಾಕುಲಂಕ್ಕೆ ತೆರಳುತ್ತಿರುವ ಮಂಗಳ ಎಕ್ಸ್‌ಪ್ರೆಸ್ (೧೨೬೧೮) ರೈಲಿನ ಬಿ-೪ ಎಸಿ ಬೋಗಿಯಲ್ಲಿ, ಎಸಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ, ಅದನ್ನು ದುರಸ್ತಿಪಡಿಸುವಂತೆ ಪ್ರಯಾಣಿಕರೊಬ್ಬರು ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ತಕ್ಷಣ ಆಗಮಿಸಿದ ತಂತ್ರಜ್ಞರು ಅದನ್ನು ದುರಸ್ತಿ ಮಾಡಿ ತೆರಳಿದ್ದರು ಎನ್ನಲಾಗಿದೆ. ತಡರಾತ್ರಿ ೧.೨೦ರ ಸುಮಾರಿಗೆ ರೈಲು ಬಿಜೂರು ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಕಂಬದಕೋಣೆಯಲ್ಲಿ ತೆರಳುತ್ತಿದ್ದಾಗ ಬೋಗಿಯ ಎಸಿಯ ಫ್ಯಾನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣ ರೈಲನ್ನು ನಿಲ್ಲಿಸಲಾಗಿದ್ದು ಅಲ್ಲಿನ ಸ್ಥಳೀಯರು ತಮ್ಮ ಪಂಪ್‌ಸೆಟ್‌ನಿಂದ ನೀರನ್ನು ಹಾಕಿ ಬೆಂಕಿಯನ್ನು ಹತೋಟಿಗೆ ತರುವ ಕೆಲಸ ಮಾಡಿದ್ದರು.
ಬೋಗಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕುಂದಾಪುರದಲ್ಲಿ ಇಳಿಯಬೇಕಾಗಿದ್ದ ಮಹಿಳೆಯೊಬ್ಬರು ಅದನ್ನು ಗಮನಿಸಿ, ತಕ್ಷಣ ಇತರ ಪ್ರಯಾಣಿಕರನ್ನು ಎಚ್ಚರಿಸಿ, ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ದೊರೆತಿಲ್ಲ. ಒಂದು ಕಡೆ ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗುತ್ತಿದ್ದರೆ, ಇನ್ನೊಂದು ಕಡೆ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯ ನಡೆಸಿದ ಹಿನ್ನೆಲೆಯಲ್ಲಿ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ., ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರಿಗೆ ಸಣ್ಣಪುಟ್ಟ ಗಾಯವಾಗಿದ್ದರೆ, ಮಹಿಳೆಯೊಬ್ಬರು ರಕ್ತದೊತ್ತಡಕ್ಕೆ ತುತ್ತಾಗಿದ್ದರು.
.