10 ನೇ ಮಹಡಿಯಲ್ಲಿ ಸಿಲುಕಿದ್ದ ಎಂಟು ವರ್ಷದ ವಿಶೇಷ ಚೇತನ ಮಗುವನ್ನು ರಕ್ಷಿಸಿದ ಅಗ್ನಿಶಾಮಕ ದಳ: ಉಡುಪಿಯಲ್ಲೊಂದು ಸಿನೀಮೀಯ ಮಾದರಿ ಕಾರ್ಯಾಚರಣೆ

ಉಡುಪಿ: ಇಲ್ಲಿನ ಬ್ರಹ್ಮಗಿರಿಯಲ್ಲಿರುವ ಅಪಾರ್ಟ್‌ಮೆಂಟ್‌ ಒಂದರ 11ನೇ ಮಹಡಿಯ ಬಾಲ್ಕನಿಯಿಂದ 10 ನೇ ಮಹಡಿಗೆ ಇಳಿದ ಎಂಟು ವರ್ಷದ ವಿಶೇಷ ಚೇತನ ಮಗುವನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ತಂಡವೊಂದು ವಿಶೇಷ ರಕ್ಷಣಾ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ರಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸೋಮವಾರ ಈ ಘಟನೆ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯ ಕ್ಷಿಪ್ರ ಸ್ಪಂದನೆ ಮಗುವಿನ ಸುರಕ್ಷತೆಯನ್ನು ಖಾತ್ರಿಪಡಿಸಿದೆ.

ಘಟನೆಯ ವಿವರ

ಸೋಮವಾರ ಬೆಳಗ್ಗೆ 11:40 ರ ಸುಮಾರಿಗೆ ಸಂಕಟದ ಕರೆ ಸ್ವೀಕರಿಸಿದ ತಕ್ಷಣ ಠಾಣಾಧಿಕಾರಿ ಸತೀಶ್ ಎನ್ ಅವರ ನೇತೃತ್ವದಲ್ಲಿ ಎಂಟು ಸದಸ್ಯರ ತಂಡವು ಸ್ಥಳಕ್ಕೆ ಆಗಮಿಸಿದೆ. ಆರುಷ್ ಎಂಬ ಎಂಟು ವರ್ಷದ ಮಗುವು 11 ನೇ ಮಹಡಿಯಲ್ಲಿ ತನ್ನ ಮಲಗುವ ಕೋಣೆಗೆ ಬೀಗ ಹಾಕಿಕೊಂಡಿದ್ದು, ಬಾಲ್ಕನಿ ಮೂಲಕ 10 ನೇ ಮಹಡಿಗೆ ಇಳಿದು ಅಲ್ಲಿ ಸಿಕ್ಕಿಬಿದ್ದಿರುವುದನ್ನು ತಂಡವು ಕಂಡಿದೆ.

Fire dept rescues special child trapped on 10th floor of Udupi building
Image: ToI

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರಕ್ಷಣಾ ತಂಡವು ಸಮಯವನ್ನು ವ್ಯರ್ಥ ಮಾಡದೆ ಹೈಡ್ರಾಲಿಕ್ ಕಟ್ಟರ್ ಅನ್ನು ಬಳಸಿ 10 ನೇ ಮಹಡಿಯಲ್ಲಿನ ಗ್ರಿಲ್‌ಗಳನ್ನು ತ್ವರಿತವಾಗಿ ಕತ್ತರಿಸಿದೆ. ಭಯಭೀತ ಮಗುವನ್ನು ಸಂಪರ್ಕಿಸಿ ಶಾಂತವಾಗಿರಲು ಮತ್ತು ಕಿಟಕಿಯ ಬಳಿ ಇರಲು ತಂಡವು ತಿಳಿಹೇಳಿದೆ. ಒಂದು ಗಂಟೆ ಅವಧಿಯ ಕಾರ್ಯಾಚರಣೆಯ ಉದ್ದಕ್ಕೂ, ತಂಡವು ಉತ್ಕೃಷ್ಟ ಮಟ್ಟದ ವೃತ್ತಿಪರತೆ ಮತ್ತು ಪರಿಣತಿಯನ್ನು ಪ್ರದರ್ಶಿಸಿದೆ.

ಅದೃಷ್ಟವಶಾತ್, ಘಟನೆಯನ್ನು ಕಂಡ ನೆರೆಮನೆಯವರು ಆರುಷ್‌ನ ಕುಟುಂಬಕ್ಕೆ ತಕ್ಷಣ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಮನೆಯವರು ಮಲಗುವ ಕೋಣೆಯ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಗ್ಗದ ಸಹಾಯದಿಂದ ಕೆಳಗಿಳಿದ ರಕ್ಷಣಾ ತಂಡವು ಬಾಲಕನನ್ನು ಸುರಕ್ಷಿತವಾಗಿ ಮೇಲೆತ್ತಿ ರಕ್ಷಿಸಿದೆ.

ಆರುಷ್‌ನ ಯಶಸ್ವಿ ರಕ್ಷಣೆಯು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಶೌರ್ಯ ಮತ್ತು ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಇಲಾಖೆಗಳ ಕ್ಷಿಪ್ರ ಕಾರ್ಯಾಚರಣೆ ಮತ್ತು ಜೀವ ಉಳಿಸುವ ಬದ್ದತೆಯನ್ನು ಸಾರ್ವಜನಿಕರು ಕೊಂಡಾಡಿದ್ದಾರೆ.