ಚುನಾವಣಾ ಅಕ್ರಮದ ದೂರುಗಳನ್ನು ಸಿ-ವಿಜಿಲ್‌ನಲ್ಲಿ ಆ್ಯಪ್‌ ನಲ್ಲಿ ದಾಖಲಿಸಿ

ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ತಮ್ಮ ನಾಯಕರನ್ನು ಆಯ್ಕೆ ಮಾಡುವ ಅವಕಾಶವಿದೆ. ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ, ನ್ಯಾಯಸಮ್ಮತ, ಮುಕ್ತ
ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಯಲು ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಯಲು ಮಾದರಿ ನೀತಿ ಸಂಹಿತೆ ತಂಡ, ಸೆಕ್ಟರ್ ಅಧಿಕಾರಿಗಳ ತಂಡ, ಪೊಲೀಸ್ ತಂಡ, ಫ್ಲೈಂಯಿಂಗ್ ಸ್ಕ್ವಾಡ್ ತಂಡ, ವೀಡಿಯೋ ವೀಕ್ಷಣಾ ತಂಡ ಸೇರಿದಂತೆ ಅನೇಕ ತಂಡಗಳನ್ನು ರಚಿಸಿದೆ. ಇದರ ಜೊತೆಗೆ ಚುನಾವಣಾ ಆಯೋಗವು ಸಿ-ವಿಜಿಲ್ (C-Vigil) ಆ್ಯಪ್‌
ರೂಪಿಸಿದೆ.

ಚುನಾವಣೆಗೆ ಸಂಬಂಧಿಸಿದಂತೆ ಯಾವುದಾದರೂ ದೂರುಗಳು ಇದ್ದಲ್ಲಿ ಸಿ-ವಿಜಿಲ್ ಮೂಲಕ ದೂರು ನೀಡಿದ್ದಲ್ಲಿ ತಕ್ಷಣವೇ ಚುನಾವಣಾ ಅಧಿಕಾರಿಗಳು ದೂರಿನ ವಿರುದ್ಧ ಕ್ರಮ ಜರುಗಿಸಲಿದ್ದಾರೆ. ಯಾವುದೇ ಅಭ್ಯರ್ಥಿ ಅಥವಾ ಪಕ್ಷದವರು ಅಥವಾ ಅವರ ಪರವಾಗಿ ಮತದಾರರನ್ನು ಸೆಳೆಯಲು ಹಣ, ಮದ್ಯ, ಉಡುಗೊರೆಗಳನ್ನು ಹಂಚುವುದು ಸೇರಿದಂತೆ ಮತ್ತಿತರ ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಚುನಾವಣಾ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ದೂರು ನೀಡುವುದು ಯಾರಿಗೆ ಅಥವಾ ಹೇಗೆ? ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳನ್ನು ಹೇಗೆ ನಿರ್ಬಂಧಿಸುವುದು ಎಂಬ ಹಲವು ಪ್ರಶ್ನೆಗಳಿಗೆ ಸಿ-ವಿಜಿಲ್ ಆ್ಯಪ್‌ (ಸಿಟಿಜನ್-ವಿಜಿಲಿಯನ್ಸ್ ಆ್ಯಪ್‌)
ಮೂಲಕ ಬೆರಳ ತುದಿಯ ಬಳಕೆಯೊಂದಿಗೆ ಸ್ಮಾರ್ಟ್ ಫೋನ್‌ಗಳ ಮೂಲಕ ದೂರು ನೀಡಬಹುದಾಗಿದೆ.

ಸಿ-ವಿಜಿಲ್ ಆಪ್ ಡೌನ್‌ಲೋಡ್: ಮೊದಲು ಗೂಗಲ್ ಪ್ಲೇಸ್ಟೋರ್ ಅಥವಾ ಆಪಲ್ ಆ್ಯಪ್‌ ಸ್ಟೋರ್‌ನಿಂದ ಸಿ-ವಿಜಿಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ಯಾವುದೇ ಚುನಾವಣಾ ಸಂಬಂಧಿತ ಉಲ್ಲಂಘನೆಗಳ ಫೋಟೋಗಳು ಅಥವಾ ವೀಡಿಯೊಗಳನ್ನು ಸೆರೆಹಿಡಿಯಿರಿ. ನಿಮ್ಮ ವರದಿಯನ್ನು ಅಪ್ಲಿಕೇಶನ್ ಮೂಲಕ ಅಪ್‌ಲೋಡ್ ಮಾಡಿ, ಘಟನೆ ಮತ್ತು ಸ್ಥಳದ ವಿವರಗಳನ್ನು ಒದಗಿಸಿ. ನಿಮ್ಮ ವರದಿಯನ್ನು ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತವಾಗಿ ರವಾನಿಸಲಾಗುತ್ತದೆ.

ಸಿ-ವಿಜಿಲ್ ಆ್ಯಪ್‌ ಕಾರ್ಯ ಹೇಗೆ?

ಆ್ಯಪ್‌ ಓಪನ್ ಮಾಡಿದಾಗ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಹಾಕಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಹಣ, ಮದ್ಯ, ಉಡುಗೊರೆಗಳನ್ನು ಹಂಚುವ ಸಂದರ್ಭದಲ್ಲಿ ಸಾರ್ವಜನಿಕರು ಫೋಟೋ ಮತ್ತು ವಿಡಿಯೋವನ್ನು (2
ನಿಮಿಷ) ಸೆರೆಹಿಡಿದು ಈ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಅಲ್ಲಿನ ವಿಳಾಸವನ್ನು ನಮೂದಿಸಬೇಕು. ಜೊತೆಗೆ ಇದು ಸಂಪೂರ್ಣ ಉಚಿತವಾಗಿರಲಿದೆ.

ಏನೆಲ್ಲಾ ದೂರು ನೀಡಬಹುದು?

ವ್ಯಕ್ತಿಯೊಬ್ಬರು ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಹಣ ವಿತರಣೆ ಮಾಡಿದರೆ, ಉಡುಗೊರೆ, ಮದ್ಯ ಹಂಚಿಕೆ, ಅನುಮತಿ ಪಡೆಯದೇ ಬ್ಯಾನರ್ ಅಥವಾ ಪೋಸ್ಟರ್, ಬೆದರಿಕೆ ಹಾಕುವುದು, ಬಂದೂಕು ಪ್ರದರ್ಶನ, ಧಾರ್ಮಿಕ ಅಥವಾ ಕೋಮು ಕುರಿತು ಪ್ರಚೋದಾರಿತ ಭಾಷಣ, ಮತಗಟ್ಟೆಯ 200 ಮೀಟರ್ ಪ್ರದೇಶದಲ್ಲಿ ನಿಷೇಧದ ಅವಧಿಯಲ್ಲೂ ಪ್ರಚಾರ, ಮತದಾನದ ದಿನದಂದು ಮತದಾರರನ್ನು
ಸಾಗಿಸುವುದು. ಹೀಗೆ ಯಾವುದೇ ರೀತಿ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಈ ಆ್ಯಪ್‌ನಲ್ಲಿ ದೂರು ಕೊಡಬಹುದು.

100 ನಿಮಿಷಗಳ ಒಳಗೆ ಕ್ರಮ:

ಆ್ಯಪ್‌ನಲ್ಲಿ ದಾಖಲಿಸುವ ದೂರುಗಳ ಬಗ್ಗೆ ಜಿಲ್ಲಾ ಮಟ್ಟದ ಸಿ-ವಿಜಿಲ್ ನೋಡೆಲ್ ಅಧಿಕಾರಿಗಳು ದೂರಿಗೆ ಸಂಬಂಧಿಸಿದಂತೆ ಆ ಕ್ಷೇತ್ರ ವ್ಯಾಪ್ತಿಯ ಎಫ್.ಎಸ್.ಟಿ ತಂಡದವರಿಗೆ ಕ್ರಮ ಕೈಗೊಳ್ಳಲು ಕಳುಹಿಸಿಕೊಡುತ್ತಾರೆ. ಅವರು ಸಾರ್ವಜನಿಕರ ದೂರುಗಳಿಗೆ 100 ನಿಮಿಷಗಳ ಒಳಗಾಗಿ ಕ್ರಮ ಕೈಗೊಳ್ಳುತ್ತಾರೆ. ಇದರಿಂದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ಆಮಿಷಗಳು ಸಾಕ್ಷಿ ಸಮೇತ ದಾಖಲಾಗಲಿವೆ.

ದೂರಿನೊಂದಿಗೆ ಸೆರೆಹಿಡಿಯಲಾದ ಜಿಪಿಎಸ್ ಮಾಹಿತಿಯು ಅದನ್ನು ಸಂಬಂಧಪಟ್ಟ ಜಿಲ್ಲಾ ನಿಯಂತ್ರಣ ಕೊಠಡಿಗೆ ಸ್ವಯಂಚಾಲಿತವಾಗಿ ಫ್ಲಾಗ್ ಮಾಡುತ್ತದೆ. ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ರವಾನಿಸಲು ಅನುವು ಮಾಡಿಕೊಡುತ್ತದೆ. ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಈಗಾಗಲೇ ಕಂಟ್ರೋಲ್ ರೂಂ ಮತ್ತು ಸಿ-ವಿಜಿಲ್ ತಂಡ
ಕಾರ್ಯಗತವಾಗಿದೆ. ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯ (ಮಾ.30) ವರೆಗೆ ಒಟ್ಟು 245 ದೂರುಗಳು ಸಿ-ವಿಜಿಲ್ ಮುಖಾಂತರ ದಾಖಲಾಗಿದ್ದು, ಎಲ್ಲಾ 245 ಪ್ರಕರಣಗಳನ್ನು ವಿಲೇ ಮಾಡಲಾಗಿದೆ.

ದೂರು ನೀಡುವಾಗ ದೂರುದಾರರ ಹೆಸರು, ವಿಳಾಸವನ್ನು ಗೌಪ್ಯವಾಗಿ ಇಡಲಾಗುತ್ತದೆ. ಚುನಾವಣೆ ಮುಗಿಯುವವರೆಗೂ ಮೂರು ಪಾಳಿಗಳಲ್ಲಿ 24 ಗಂಟೆಗೂ ಚುನಾವಣಾ ಸಿಬ್ಬಂದಿ ಕಾರ್ಯ ನಿರ್ವಹಿಸುವರು ಎಂದು ಜಿಲ್ಲಾ ಸಿ-ವಿಜಿಲ್ ನೋಡೆಲ್ ಅಧಿಕಾರಿಯಾದ ಕುಮಾರ್ ಬಿ.ಆರ್ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಯುತವಾಗಿ ನಡೆಸಲು ಯಾವುದೇ ಚುನಾವಣೆ ಅಕ್ರಮ, ಆಮಿಷ ತಡೆಯಲು ಸಿವಿಜಿಲ್ ಬಳಸುವ ಮೂಲಕ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಿ, ಪ್ರಜಾಪ್ರಭುತ್ವವನ್ನು ದೃಢಗೊಳಿಸೋಣ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.