ನವದೆಹಲಿ: ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಶುಕ್ರವಾರದಂದು, ಭಾರತವು ತನ್ನ ಮೊಟ್ಟಮೊದಲ ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ಅನ್ನು ಆಯೋಜಿಸುತ್ತಿರುವುದು ಹೆಮ್ಮೆ ಮತ್ತು ಜವಾಬ್ದಾರಿಯ ವಿಷಯವಾಗಿದೆ ಎಂದಿದ್ದಾರೆ.
ತಮ್ಮ ವೀಡಿಯೊ ಸಂದೇಶದಲ್ಲಿ ಮಾತನಾಡಿದ ಠಾಕೂರ್, ವಿಶ್ವಕಪ್ ನ ಎಲ್ಲಾ 16 ತಂಡಗಳನ್ನು ಭಾರತಕ್ಕೆ ಸ್ವಾಗತಿಸಿದ್ದಾರೆ. ಇದು ದೇಶದ ಮಹಿಳಾ ಕ್ರೀಡೆಗಾಗಿ ವಿಶೇಷ ಪಂದ್ಯಾವಳಿಯಾಗಿದೆ. ಕ್ರೀಡೆಯಲ್ಲಿ ಮಹಿಳೆಯರನ್ನು ಒಳಗೊಂಡ ಆಟ ಮೈದಾನವನ್ನಾಗಿ ಮಾಡಲು ಹೆಚ್ಚಿನ ಯುವತಿಯರನ್ನು ಈ ಕಾರ್ಯಕ್ರಮವು ಪ್ರೇರೇಪಿಸಲಿದೆ ಎಂದು ಅವರು ಹೇಳಿದ್ದಾರೆ.
ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ಈ ವರ್ಷದ ಅಕ್ಟೋಬರ್ 11 ರಿಂದ ಅಕ್ಟೋಬರ್ 30 ರವರೆಗೆ ಭಾರತದಲ್ಲಿ ನಡೆಯಲಿದೆ. ಭಾರತವು ಅಮೇರಿಕಾ, ಮೊರಾಕೊ ಮತ್ತು ಬ್ರೆಜಿಲ್ನೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಅಕ್ಟೋಬರ್ 11 ರಂದು ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಸ್ಟೇಡಿಯಂನಲ್ಲಿ ಭಾರತದ ಮೊದಲ ಪಂದ್ಯ ಅಮೇರಿಕಾ ತಂಡದ ವಿರುದ್ಧ ನಡೆಯಲಿದೆ. ಒಡಿಶಾದ ಕಳಿಂಗ ಸ್ಟೇಡಿಯಂ, ಗೋವಾದ ಪಂಡಿತ್ ಜವಾಹರಲಾಲ್ ನೆಹರು ಸ್ಟೇಡಿಯಂ ಮತ್ತು ನವಿ ಮುಂಬಯಿಯ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಫಿಫಾ ಯು-17 ಮಹಿಳಾ ವಿಶ್ವಕಪ್ನ ಫೈನಲ್ ಪಂದ್ಯವು ಅಕ್ಟೋಬರ್ 30 ರಂದು ನವಿ ಮುಂಬಯಿನಲ್ಲಿ ನಡೆಯಲಿದೆ.