ಸಾಮಾಜಿಕ ಜಾಲತಾಣದಲ್ಲಿ ಶಿವ-ಪಾರ್ವತಿ-ಗಣೇಶನ ಫೋಟೋ ಸದ್ದು ಮಾಡುತ್ತಿದ್ದು ಎಲ್ಲರ ಗಮನಸೆಳೆದಿದೆ. ಪುಟ್ಟ ಜಲಪಾತ ಧುಮುಕುವಲ್ಲಿ ಶಿವ-ಪಾರ್ವತಿ-ಗಣೇಶ ಕೂತು ಫೋಟೋಗೆ ಫೊಸ್ ಕೊಟ್ಟಿದ್ದು, ಈ ಚೆಂದದ ನೋಟಕ್ಕೆ ಬಹುತೇಕ ಮಂದಿ ಖುಷ್ ಆಗಿದ್ದಾರೆ.
ಹೌದು ಶಿವ, ಪಾರ್ವತಿ ಮತ್ತು ಗಣಪತಿ ವೇಷ ತೊಟ್ಟು ಫೋಟೋಗೆ ಚಂದದ ಫೋಸು ಕೊಟ್ಟು ಈ ಗಣೇಶೋತ್ಸವಕ್ಕೆ ಎಂಟ್ರಿ ಕೊಟ್ಟಿದ್ದಾರೆ ಈ ಮೂರು ಮಂದಿ.
ಯಾರಪ್ಪಾ ಇಷ್ಟೊಂದು ಚೆಂದ ವೇಷ ಹಾಕಿ ದೇವರಾಗಿದ್ದು ಅಂತೀರಾ? ಇವರೇ ಬೆಳ್ತಂಗಡಿಯ ಪೂರ್ಣಿಮ ಪೆರ್ಗಣ್ಣ, ಮಂಗಳೂರಿನ ಪ್ರಗತಿ ಅಮೀನ್ ಮತ್ತು ಅಂಶಿಕ್. ಶಿವನಾಗಿ ಶಿವ ತಾಂಡವ ನೃತ್ಯಗೈದ ಪೂರ್ಣಿಮಾ ಪೆರ್ಗಣ್ಣ, ಪಾರ್ವತಿಯಾಗಿ ಪ್ರಗತಿ ಅಮೀನ್, ಗಣಪತಿಯಾಗಿ ಅಂಶಿಕ್ ಇವರ ಭಾವ ಭಂಗಿಗಳು ನೋಡುವರನ್ನು ತನ್ಮಯಗೊಳಿಸುವಂತಿದೆ. ಶಿವ-ಪಾರ್ವತಿ ಜೋಡಿಯಂತೂ ಅಮೂಲ್ಯ ಪ್ರೇಮವನ್ನು ಸಾರುವಂತಿದೆ. ಅವರ ಪ್ರೇಮಕ್ಕೆ ಸಾಕ್ಷಿಯಾಗುವಂತೆ ಗಣಪತಿ ಕೂಡ ಚಿತ್ರದಲ್ಲಿ ರಾರಾಜಿಸಿದ್ದಾನೆ. ಶಿವನ ರೌದ್ರತೆ, ಪಾರ್ವತಿಯ ಸೌಮ್ಯತೆ, ಗಣಪತಿ ಪ್ರಸನ್ನತೆ ಎಲ್ಲವೂ ಇಲ್ಲಿದೆ.
ಚೌತಿಗೊಂದು ವಿಭಿನ್ನ ಪ್ರಯೋಗ:
ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಕೃಷ್ಣನ ವೇಷ ಹಾಕಿ ಫೋಟೋ ಶೂಟ್ ಮಾಡುವುದು ಮಾಮೂಲು, ಆದ್ರೆ ಈ ಸಲ ಚೌತಿಗೂ ಇಂತಹ ಫೋಟೋ ಶೂಟ್ ಮಾಡಿರುವುದು ಗಮನಸೆಳೆದಿದೆ. ಬೆಳ್ತಂಗಡಿಯ ಸುಗ್ಗು ಸ್ಟುಡಿಯೋದ ಸುಗುಣೇಂದ್ರ ಹೆಗಡೆ ಶಿವ-ಪಾರ್ವತಿ-ಗಣೇಶ ವಿವಿಧ ಭಂಗಿಗಳನ್ನು ತಮ್ಮ ಕೆಮರಾದಲ್ಲಿ ಸೆರೆಹಿಡಿದವರು. ಬೆಳ್ತಂಗಡಿಯ ಕಾರಿಂಜದ ನಿಸರ್ಗ ವೈಭವಗಳನ್ನೂ ಶಿವ-ಪಾರ್ವತಿಯ ಚಿತ್ರದ ಹಿನ್ನೆಲೆಯಲ್ಲಿ ತುಂಬಿದ್ದಾರೆ ಸುಗುಣೇಂದ್ರ ಹೆಗಡೆ ಅವರು.
ಅಂದ ಹಾಗೆ ಈ ಶಿವ-ಪಾರ್ವತಿ-ಗಣಪತಿಯ ಮೇಕಪ್ ಮಾಡಿದವರು ವಿನ್ಯಾಸಗಾರ್ತಿ ಮಂಗಳೂರಿನ ಉಷಾ ಅಮೀನ್ ಮತ್ತು ಪೂಜಾ ಅವರು. ಈ ಕಲ್ಪನೆಗೆ ಶರುಣ್ ಮತ್ತು ಗುರುಪ್ರಸಾದ್ ಅವರ ಸಹಕರಿಸಿದ್ದಾರೆ.
“ಶಿವ-ಪಾರ್ವತಿ-ಗಣಪತಿಯ ವಿಭಿನ್ನ ಮೇಕಪ್ ಮಾಡಿ ಫೋಟೋ ಶೂಟ್ ಮಾಡುವ ಆಸೆ ಇತ್ತು. ಆ ಆಸೆ ಈಗ ನೆರವೇರಿದೆ. ಶಿವ ಪಾರ್ವತಿ ಮತ್ತು ಗಣಪತಿಯ ಕುರಿತು ನಮಗೆ ಇನ್ನಷ್ಟು ಭಕ್ತಿ ಮೂಡಿಸೋ ಕೆಲಸ ಇಂತಹ ಚಿತ್ರಗಳು ಮಾಡಲಿ ಎನ್ನುವುದು ನಮ್ಮ ಉದ್ದೇಶ, ಈ ಚಿತ್ರಗಳಿಗೆ ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆಗಳು ಬಂದಿರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ ಉಷಾ ಅಮೀನ್.
ಒಟ್ಟಾರೆಯಾಗಿ ಈ ಚಿತ್ರಗಳನ್ನು ನೋಡುತ್ತಿದ್ದರೆ ಶಿವ ಪಾರ್ವತಿ ಮತ್ತು ಗಣಪತಿ ಬಗ್ಗೆ ಇನ್ನಷ್ಟು ಭಕ್ತಿ ಮೂಡುವುದಂತೂ ನಿಜ.