ಫೆ.8: ಉಡುಪಿ ಕಿದಿಯೂರು ಶ್ರೀ ವಿದ್ಯಾಸಮುದ್ರತೀರ್ಥ ಪ್ರೌಢಶಾಲೆ ಸುವರ್ಣ ಸಂಭ್ರಮ

ಉಡುಪಿ: ಕಿದಿಯೂರು ವಿದ್ಯಾಸಮುದ್ರತೀರ್ಥ ಪ್ರೌಢಶಾಲೆಯ ಸುವರ್ಣ ಸಂಭ್ರಮ ಇದೇ 8ರಿಂದ 10ರ ವರೆಗೆ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಕೆ. ಉದಯಕುಮಾರ್‌ ಶೆಟ್ಟಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯ ಸುವರ್ಣ ಮಹೋತ್ಸವ ಸಮಿತಿಯ ವತಿಯಿಂದ ಈ ಸಮಾರಂಭ ಜರುಗಲಿದೆ. ಫೆ. 8ರಂದು ಬೆಳಿಗ್ಗೆ 9ಗಂಟೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸುವರ್ಣ ಸಂಭ್ರಮದ ಧ್ವಜಾರೋಹಣ ನೆರವೇರಿಸುವರು.
ಬೆಳಿಗ್ಗೆ 9.30ಕ್ಕೆ ಉದ್ಯಮಿ ಜಿ. ಶಂಕರ್‌ ನೂತನ ಸಭಾಂಗಣವನ್ನು ಉದ್ಘಾಟಿಸುವರು.
ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಆಶೀರ್ವಚನ ನೀಡುವರು. ಉದ್ಯಮಿ ಯು. ಹರಿಯಪ್ಪ ಕೋಟ್ಯಾನ್‌ ವಿಜ್ಞಾನ ಪ್ರಯೋಗಾಲಯದ ಶಂಕುಸ್ಥಾಪನೆ ನೆರವೇರಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸುವರು. ಅಂದು ಸಂಜೆ 7.30ಕ್ಕೆ ಸುವರ್ಣ ಸಂಭ್ರಮದ ಉದ್ಘಾಟನೆಯನ್ನು ವಿದ್ಯಾವಲ್ಲಭ ಸ್ವಾಮೀಜಿ ನೆರವೇರಿಸುವರು ಎಂದು
ತಿಳಿಸಿದರು.
ಫೆ. 8ರಿಂದ 10ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ. 8ರಂದು ಸಂಜೆ 6ಗಂಟೆಗೆ ಪ್ರೌಢಶಾಲಾ ಮಕ್ಕಳಿಂದ ‘ವೀರವರ್ಮ ವಿಜಯ’ ಯಕ್ಷಗಾನ ಹಾಗೂ ಅಂದು ರಾತ್ರಿ 9 ಗಂಟೆಗೆ ಚಾ ಪರ್ಕ ಕಲಾವಿದರಿಂದ ‘ಪುಷ್ಪಕ್ಕನ ಇಮಾನ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಫೆ. 9ರಂದು ಸಂಜೆ 6ಗಂಟೆಯಿಂದ ಯಕ್ಷ–ಗಾನ–ನೃತ್ಯ–ವೈಭವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ಗಂಟೆಗೆ ‘ಗದಾಯುದ್ಧ’ ಯಕ್ಷಗಾನ ಪ್ರದರ್ಶನವಾಗಲಿದೆ.
ಫೆ. 10ರಂದು ಸಂಜೆ 6.30ಕ್ಕೆ ಆಯ್ದ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಪುಣ್ಯಕೋಟಿ ಯಕ್ಷಗಾನ ನೃತ್ಯ ರೂಪಕ ಜರುಗಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಲಾ ಸಂಚಾಲಕ ಪ್ರೊ. ರಾಧಾಕೃಷ್ಣ ಆಚಾರ್ಯ, ಮುಖ್ಯೋಪಾಧ್ಯಾಯಿನಿ ಮರೀನಾ ಸರೋಜ, ಸಮಿತಿಯ ಉಪಾಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಕಾರ್ಯದರ್ಶಿ ಜಗನ್ನಾಥ್‌ ಕಡೆಕಾರ್‌ ಇದ್ದರು.