ಕೋಟ: ಫೆ. 24ರಂದು ಜಿಲ್ಲಾಮಟ್ಟದ ಉದ್ಯೋಗ ಮೇಳ

ಉಡುಪಿ: ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿಯಲ್ಲಿ ‘ಭರವಸೆ’ ಎಂಬ ಶೀರ್ಷಿಕೆಯಡಿ ಜಿಲ್ಲಾಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮ ಇದೇ 24ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲಾಡಳಿತ,
ಜಿಲ್ಲಾ ಪಂಚಾಯಿತಿ, ಕೌಶಲಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೋಟ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಹಾಗೂ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಸಹಯೋಗದಲ್ಲಿ ಈ ಉದ್ಯೋಗವನ್ನು ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಎಚ್‌.ಪಿ, ವಿಪ್ರೊ, ಎಚ್‌ಡಿಎಫ್‌ಸಿ, ಆ್ಯಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌,
ಹಿಂದುಜಾ ಗ್ಲೋಬಾಲ್‌ ಸೇರಿದಂತೆ 70ಕ್ಕೂ ಹೆಚ್ಚಿನ ಬಹುರಾಷ್ಟ್ರೀಯ ಕಂಪೆನಿಗಳು
ಮೇಳದಲ್ಲಿ ಭಾಗವಹಿಸಲಿವೆ. ಈ ಕಂಪೆನಿಗಳಲ್ಲಿ 2 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, ಅದನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿವೆ. ಈಗಾಗಲೇ 1500ಕ್ಕೂ ಹೆಚ್ಚಿನ ಉದ್ಯೋಗಾಕ್ಷಾಂಕಿಗಳು ನೊಂದಾಯಿಸಿಕೊಂಡಿದ್ದು, ಸುಮಾರು 2500ಕ್ಕೂ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಡಾ. ಜಯಮಾಲ ಮೇಳವನ್ನು ಉದ್ಘಾಟಿಸುವರು. ಸಂಸದೆ ಶೋಭಾ ಕರಂದ್ಲಾಜೆ ಸಂದರ್ಶನಕ್ಕೆ ಚಾಲನೆ ನೀಡುವರು. ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕೌಶಲಾಭಿವೃದ್ಧಿ ಕೇಂದ್ರದ ಅಧಿಕಾರಿ ಭಾಸ್ಕರ್‌ ಎ. ಅಮೀನ್‌, ಪ್ರಧಾನ ಮಂತ್ರಿ ಕೌಶಲಾಭಿವೃದ್ಧಿ ಕೇಂದ್ರದ ಅಧಿಕಾರಿ ರಾಘವೇಂದ್ರ ಇದ್ದರು.