ಫೆ. 23ರಂದು ಧನುರಾಸನದಲ್ಲಿ ವಿಶ್ವ ದಾಖಲೆಗೆ ತನುಶ್ರೀ ಸಜ್ಜು

ಉಡುಪಿ: ಇಲ್ಲಿನ ಸೇಂಟ್‌ ಸಿಸಿಲೀಸ್‌ ಸಮೂಹ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಇದೇ
23ರಂದು ಸಂಜೆ 5ಗಂಟೆಗೆ ತನುಶ್ರೀ ಪಿತ್ರೋಡಿ ಅವರು ಯೋಗಾಸನದ ಭಂಗಿಯಾದ
‘ಧನುರಾಸನ’ವನ್ನು ಒಂದು ನಿಮಿಷದಲ್ಲಿ ಅತೀ ಹೆಚ್ಚು ಬಾರಿ ಮಾಡುವ ಮೂಲಕ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ನಲ್ಲಿ ಹೊಸ ದಾಖಲೆ ಬರೆಯಲು ಪ್ರಯತ್ನಿಸಲಿದ್ದಾರೆ. ಎಂದು ಬಡಗುಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್‌ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡಗುಬೆಟ್ಟು ಕ್ರೆಡಿಟ್ ಕೋ-
ಆಪರೇಟಿವ್‌ ಸೊಸೈಟಿ, ಪಿತ್ರೋಡಿಯ ವೆಂಕಟರಮಣ ಸ್ಪೋರ್ಟ್ಸ್‌ ಮತ್ತು ಕಲ್ಚರಲ್ಸ್‌
ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಈ ವಿಶ್ವದಾಖಲೆಯ ಪ್ರಯತ್ನ ನಡೆಯಲಿದೆ ಎಂದರು.
ತನುಶ್ರೀ ಈಗಾಗಲೇ ಯೋಗದ ನಿರಾಲಾಂಭ ಪೂರ್ಣ ಚಕ್ರಾಸನವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್‌ ಬುಕ್‌ ಆಫ್‌ ರೆಕಾರ್ಡ್‌ ಸಾಧನೆ ತೋರಿದ್ದರು. ಅಲ್ಲದೆ, 2018ರಲ್ಲಿ ಎದೆ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಸಿ ಉಳಿದ ಭಾಗವನ್ನು ಒಂದು ನಿಮಿಷಕ್ಕೆ 41 ಬಾರಿ ತಿರುಗಿಸುವ ಮೂಲಕ ವಿಶ್ವ ದಾಖಲೆಯನ್ನು ಮಾಡಿದ್ದರು. ಈಗಾಗಲೇ ತನುಶ್ರೀ ಎರಡು ದಾಖಲೆಯನ್ನು ಮಾಡಿದ್ದಾರೆ. ಈಗ ಮೂರನೇ ವಿಶ್ವದಾಖಲೆ ಮಾಡಲು ಸಜ್ಜಾಗಿದ್ದಾರೆ ಎಂದು ಮಾಹಿತಿ ನೀಡಿದರು.
ವೆಂಕಟರಮಣ ಸ್ಪೋರ್ಟ್ಸ್‌ ಮತ್ತು ಕಲ್ಚರಲ್ಸ್‌ನ ಅಧ್ಯಕ್ಷ ಮಲ್ಲೇಶ್‌ ಕುಮಾರ್‌, ಭರತನಾಟ್ಯ ಗುರು ರಾಮಕೃಷ್ಣ ಕೊಡಂಚ, ತುನುಶ್ರೀಯ ತಂದೆ ಉದಯಕುಮಾರ್‌, ವಿಜಯ ಕೋಟ್ಯಾನ್‌ ಪಿತ್ರೋಡಿ ಇದ್ದರು.