ಉಡುಪಿ: ಶ್ರೀಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮನ್ಮಹಾರಥೋತ್ಸವ ಇದೇ 13ರಿಂದ 15ರ ವರೆಗೆ ದೇಗುಲದ ಆವರಣದಲ್ಲಿ ನಡೆಯಲಿದೆ. ಫೆ.13ರಂದು ಕುಂಭ ಸಂಕ್ರಮಣ ಮತ್ತು ಕೆಂಡಸೇವೆ, ಫೆ. 14ರಂದು ಮನ್ಮಹಾರಥೋತ್ಸವ ಹಾಗೂ ಫೆ. 15ರಂದು `ದೀಪೋತ್ಸವ’ ಕಾರ್ಯಕ್ರಮ ನೆರವೇರಲಿದೆ.
ದೇವಸ್ಥಾನದ ಹಿನ್ನೆಲೆ:
ಆವಂತಿಯ ರಾಜ ದೇವವರ್ಮನು ರಾಜ್ಯಭ್ರಷ್ಠನಾಗಿ ವೇಷ ಮರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ ತಿರುಗುವಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ, ಅವುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ ಸೇರಿದವು. ಅವುಗಳಲ್ಲಿ ಮಂದರತಿಯೆಂಬ ಸರ್ಪವು ಸೇರಿದ ಜಾಗವೇ ಮಂದರತಿ ಕಾನನವೆಂಬ (ಮಂದಾರತಿ) ಹೆಸರಾಯಿತು.
ಹರಕೆಯ ಯಕ್ಷಗಾನ ಬಹಳ ಜನಪ್ರಿಯ:
ಈ ಕ್ಷೇತ್ರದ ಹರಕೆ ಯಕ್ಷಗಾನ ಬಯಲಾಟ ಸಾಕಷ್ಟು ಜನಪ್ರಿಯತೆ ಗಳಿಸಿದೆ. 2040-41ನೇ ಇಸವಿಯವರೆಗೆ ಹರಕೆ ಆಟಗಳನ್ನು ಭಕ್ತರು ಕಾಣಿಕೆ ನೀಡಿ ನೊಂದಾಯಿಸಿಕೊಂಡಿದ್ದಾರೆ. ಅಂದರೆ ಕ್ಷೇತ್ರದ 5 ಮೇಳಗಳಿಗೆ 15,000ಕ್ಕೂ ಹೆಚ್ಚಿನ ಯಕ್ಷಗಾನ ಮುಂಗಡ ನೊಂದಾವಣಿಯಾಗಿದೆ. ಪ್ರತಿದಿನ ಸರಾಸರಿ 1,500 ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸುತ್ತಾರೆ. ಶುಕ್ರವಾರ, ಮಂಗಳವಾರ, ಭಾನುವಾರ ಭಕ್ತಾದಿಗಳ ಸಂಖ್ಯೆ ಹೆಚ್ಚಿರುತ್ತದೆ.