ಫೆ.23 ರಂದು ಬೀದಿನಾಯಿಗಳ ಜಾಗೃತಿ ಅಭಿಯಾನ

ಉಡುಪಿ: ಬೀದಿ ನಾಯಿಮರಿಗಳಿಗೆ ಪುನವರ್ಸತಿ ಕಲ್ಪಿಸುವ ನಿಟ್ಟಿನಲ್ಲಿ ಆರಂಭಿಸಲಾದ ಮಲ್ಪೆ ಮಧ್ವರಾಜ್‌ ಅನಿಮಲ್‌ ಕೇರ್‌ ಟ್ರಸ್ಟ್‌ನ ಉದ್ಘಾಟನೆ ಹಾಗೂ ಬೀದಿ ನಾಯಿಗಳ ಕುರಿತ ‘ನಮ್ಮ ಸ್ವಂತ, ನಮ್ಮ ಹೆಮ್ಮೆ’ ಜಾಗೃತಿ ಅಭಿಯಾನ ಇದೇ 23ರಂದು ಸಂಜೆ 5.15ಕ್ಕೆ ಮಲ್ಪೆಯ ಕಡಲ ಕಿನಾರೆಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಟ್ರಸ್ಟಿ ಬಬಿತಾ ಮಧ್ವರಾಜ್‌ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಟಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡುವರು. ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ನೂತನ ಟ್ರಸ್ಟ್‌ ಅನ್ನು ಉದ್ಘಾಟಿಸುವರು. ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌, ಉಡುಪಿ ಪೌರಾಯುಕ್ತ ಆನಂದ ಕಹ್ಳೋಲಿಕ್ಕರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.

ಈ ಪ್ರಯುಕ್ತ ಮಲ್ಪೆ ಬೀಚ್‌ನಲ್ಲಿ ಮಧ್ಯಾಹ್ನ 3.30ಕ್ಕೆ ನಾಲ್ಕರಿಂದ ಒಂಭತ್ತನೆ ತರಗತಿಯ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಪ್ರದರ್ಶನ, ಸಂಜೆ 4.30ರಿಂದ 7 ಗಂಟೆವರೆಗೆ ಬೀದಿಯಿಂದ ರಕ್ಷಿಸಲ್ಪಟ್ಟ ನಾಯಿಮರಿಗಳ ದತ್ತು ಸ್ವೀಕಾರ ಹಾಗೂ ೪.೩೦ರಿಂದ ೫.೩೦ರವರೆಗೆ ಬೀದಿ ನಾಯಿಗಳಿಗೆ ನೀರುಣಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಅಭಿಯಾನದ ಮೂಲಕ ಪ್ರಾಣಿದಯೆ, ಬೀದಿನಾಯಿಗಳ ಮೇಲಿನ ಪ್ರೀತಿ, ನಿರ್ವಹಣೆ, ಅನಾಥ ಪ್ರಾಣಿಗಳ ಕಾನೂನುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಸ್ವಯಂ ಸೇವಕರಿಗೆ ಸದಸ್ಯತ್ವ ನೀಡವುದು, ಬೀದಿ ನಾಯಿಗಳಿಗೆ ಆಹಾರ ಮತ್ತು ನೀರು ಕೊಡುವುದು, ಪ್ರಥಮ ಚಿಕಿತ್ಸೆ ಹಾಗೂ ರಕ್ಷಣೆ ಕುರಿತು ತರಬೇತಿ ನೀಡುವ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ ಎಂದು ಹೇಳಿದರು.

ಟ್ರಸ್ಟ್‌ ಮೂಲಕ ಬೀದಿಯಲ್ಲಿ ಎಸೆಯಲ್ಪಟ್ಟ ನಾಯಿಮರಿಗಳಿಗೆ ಭಾವನಾತ್ಮಕ ಬೆಂಬಲ, ಆರೋಗ್ಯದ ಆರೈಕೆ, ಆಹಾರ, ಪುನವರ್ಸತಿ ಕಲ್ಪಿಸಲಾಗುವುದು. ಅನಾರೋಗ್ಯ ಪೀಡಿತ ಬೀದಿ ನಾಯಿಗಳಿಗೆ ಪುನವರ್ಸತಿ ಒದಗಿಸಲಾಗುವುದು. ಸಮಾಜದಲ್ಲಿ ಜಾಗೃತಿ ಮತ್ತು ಬೀದಿನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ನಡೆಸಲಾಗುವುದು. ಮಲ್ಪೆ ಬೀಚ್‌ನಲ್ಲಿ ಪ್ರತಿ ಎರಡನೆ ಮತ್ತು ನಾಲ್ಕನೆ ಶನಿವಾರ ಸಂಜೆ ೪.೩೦ರಿಂದ ೭ಗಂಟೆಯವರೆಗೆ ಈ ಅಭಿಯಾನವನ್ನು ನಡೆಸಲಾಗುವುದುಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹಲ್ಕಾ, ಸುಭಾಶ್‌ ಭಟ್‌, ರಶ್ಮಿ ಭಟ್‌ ಉಪಸ್ಥಿತರಿದ್ದರು.