ಮಾದಕ ವ್ಯಸನ ಸಮಾಜಕ್ಕೆ ಮಾರಕ: ಆಪ್ತ ಸಮಾಲೋಚಕ ಲೋಹಿತ್ ಕೆ.

ಉಡುಪಿ: ಮಾದಕ ವಸ್ತುಗಳ ಸೇವನೆ ಎನ್ನುವುದು ವ್ಯಕ್ತಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಮಾರಕವಾಗಿದೆ. ಇಂದು ಸಮಾಜದಲ್ಲಿ ಅತ್ಯಾಚಾರ, ಕೊಲೆ ಹಾಗೂ ವಿವಾಹ ವಿಚ್ಛೇದನದಂತಹ ಪ್ರಕರಣಗಳು ಹೆಚ್ಚಾಗಲು ಇದೇ ಕಾರಣ. ಹದಿಹರೆಯದ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗಿ ಸಮಾಜ ಘಾತಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂದು ದೊಡ್ಡಣಗುಡ್ಡೆ ಡಾ. ಎ.ವಿ. ಬಾಳಿಗಾ ಆಸ್ಪತ್ರೆಯ ಮನೋರೋಗ ವಿಭಾಗದ ಆಪ್ತ ಸಮಾಲೋಚಕ ಲೋಹಿತ್ ಕೆ. ಕಳವಳ ವ್ಯಕ್ತಪಡಿಸಿದರು.

ಶಿರ್ವ ಸಂತಮೇರಿ ಕಾಲೇಜಿನ ವ್ಯಸನಮುಕ್ತ ಕೋಶ ಮತ್ತು ಐಕ್ಯೂಎಸಿ ಇದರ ನೇತೃತ್ವದಲ್ಲಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಕ ವ್ಯಸನ ಮತ್ತು ಯುವ ಜನತೆ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾದಕ ವ್ಯಸನಕ್ಕೆ ಯಾರು ಬೇಕಾದರೂ ಒಳಗಾಗಬಹುದು. ಅದಕ್ಕೆ ವಯಸ್ಸಿನ ಹಂಗಿಲ್ಲ. ಮಾದಕ ವ್ಯಸನದ ಜತೆಗೆ ಮೊಬೈಲ್ ಕೂಡ ವ್ಯಸನವಾಗಿ ಯುವ ಪೀಳಿಗೆಯನ್ನು ಕಾಡುತ್ತಿದೆ. ಹಾಗಾಗಿ ಭಾವನೆಗಳನ್ನು ಆತ್ಮೀಯರ ಜೊತೆ ಹಂಚಿಕೊಂಡು ಒತ್ತಡ ಕಡಿಮೆ ಮಾಡಿಕೊಳ್ಳಿ. ಕೀಳರಿಮೆಯಿಂದ ಹೊರಬಂದು ಬದುಕಿನಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ದುಶ್ಚಟಗಳಿಂದ ದೂರವಿದ್ದು, ಆರೋಗ್ಯದ ಕಡೆಗೆ ಗಮನಕೊಡಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್‍ ಮಾತನಾಡಿ, ಹದಿಹರೆಯದ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಉತ್ತಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಕಾಲೇಜಿನ ವ್ಯಸನಮುಕ್ತ ಕೋಶದ ಸಂಚಾಲಕಿ ಡಾ. ಗುಲಾಬಿ ಸ್ವಾಗತಿಸಿದರು. ಪ್ರಥಮ ಬಿಸಿಎ ವಿದ್ಯಾರ್ಥಿನಿ ಛಾಯಾ ಕಾರ್ಯಕ್ರಮ ನಿರೂಪಿಸಿದರು. ವ್ಯಸನಮುಕ್ತ ಕೋಶದ ಸಹ ಸಂಚಾಲಕಿ ಪದ್ಮಾಸಿನಿ ಯು. ವಂದಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.