ಬೈಂದೂರು: ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ

ಕುಂದಾಪುರ: ಹೊಟೇಲ್ ಕೆಲಸ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಇನ್ನೊಂದು ಯುವಕರ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬುಧವಾರ ಸಂಜೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ತರೆ ಜಂಕ್ಷನ್ ಬಳಿ ನಡೆದಿದೆ.
ಬೈಂದೂರು ಯಡ್ತರೆ ಬಾಳೆಹಿತ್ಲು ನಿವಾಸಿ ಬಾಬು ದೇವಾಡಿಗರ ಪುತ್ರ ದಿಲೀಪ್ ಕುಮಾರ್ (24) ಗಂಭೀರ ಗಾಯಗಳೊಂದಿಗೆ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌.
ಮೇ.6  ಸಂಜೆ ದಿಲೀಪ್ ಕುಮಾರ್ ಹಾಗೂ ಆತನ ತಂದೆ ಹೋಟೆಲ್ ವ್ಯವಹಾರ ಮುಗಿಸಿ ಮನೆಯತ್ತ ಹೋಗುತ್ತಿದ್ದಾಗ ಕಾರೊಂದರಲ್ಲಿ ಬಂದ ಆರೋಪಿಗಳಾದ ಬೈಂದೂರು ಮೂಲದ ಆಕಾಶ್ ಪೂಜಾರಿ, ಸುಖೇಶ್, ರೋಶನ್, ಶಿವರಾಜ್ ಹಾಗೂ ಕಿರಣ್ ಎನ್ನುವರು ತನ್ನ ಮೇಲೆ ತಲವಾರು ದಾಳಿ‌ ನಡೆಸಿದ್ದಲ್ಲದೇ ರಾಡ್ ಹಾಗೂ ದೊಣ್ಣೆಯಿಂದ ಥಳಿಸಿ ಕೊಲೆಗೆ ಯತ್ನಿಸಿದ್ದಾರೆ. ಬಳಿಕ ಚಿನ್ನದ ಚೈನ್ ದೋಚಿ ಕೊಲೆ ಬೆದರಿಕೆ ಹಾಕಿದ್ದಾರೆಂದು ದಿಲೀಪ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗಾಯಳು ದಿಲೀಪ್ ನನ್ನು ಬೈಂದೂರು ಮತ್ತು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆತನ ತಲೆಗೆ ಗಂಭೀರ ಗಾಯಗಳಾಗಿದೆ.
ಬೈಂದೂರು ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಯುವಕನ ಹೇಳಿಕೆ ಪಡೆದುಕೊಂಡಿದ್ದಾರೆ.