ಉಡುಪಿ: ಕೇಂದ್ರ ಸರಕಾರದ ಜನಪ್ರಿಯತೆ ಸಹಿಸದ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಕೃಷಿ ಮಸೂದೆಯ ಬಗ್ಗೆ ರೈತರಿಗೆ ತಪ್ಪು ಮಾಹಿತಿ ನೀಡುವುದರ ಜತೆಗೆ ಸಿ.ಎ.ಎ. ಮಾದರಿಯಲ್ಲಿ ಪ್ರತಿಭಟನೆ ನಡೆಸಿ ರೈತರ ದಾರಿ ತಪ್ಪಿಸುವ ಪ್ರಯತ್ನದಲ್ಲಿ ನಿರತರಾಗಿರುವುದು ದುರದೃಷ್ಟಕರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಜಿಲ್ಲಾ ಮತ್ತು ಮಂಡಲಗಳ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಮಸ್ಯೆಯನ್ನು ಬಗೆಹರಿಸಿ, ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಕೃಷಿ ಮಸೂದೆಯಲ್ಲಿ ಮಾರ್ಪಾಡುಗಳನ್ನು ತಂದರು. ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆಯ ಜೊತೆಗೆ ರೈತರು ತಾವು ಬೆಳೆದ ಬೆಳೆಗಳನ್ನು ಯಾವುದೇ ಮಧ್ಯವರ್ತಿ ಹಾವಳಿ ಇಲ್ಲದೆ ಮುಕ್ತ ಮಾರುಕಟ್ಟೆಯಲ್ಲಿ ಸ್ವತಂತ್ರವಾಗಿ ಮಾರಾಟ ಮಾಡುವ ಸದವಕಾಶ ಕಲ್ಪಿಸಿದರು. ರೈತಾಪಿ ವರ್ಗದಲ್ಲಿ ಭರವಸೆಯ ಹೊಸ ಆಶಾಕಿರಣ ಮೂಡಿಸಿದ್ದಾರೆ. ಆದರೆ ಕಾಂಗ್ರೆಸ್ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ರೈತ ದೇಶದ ಬೆನ್ನೆಲುಬು. ಕೇಂದ್ರ ಸರಕಾರ ನೂತನ ಕೃಷಿ ಮಸೂದೆಯ ಮೂಲಕ ಕಳೆದ 70 ವರ್ಷಗಳಿಂದ ರೈತರಿಗಾಗುತ್ತಿದ್ದ ಅನ್ಯಾಯಕ್ಕೆ ಇತಿಶ್ರೀ ಹಾಡಿದೆ. ಕೃಷಿ ವಲಯದ ಮೂಲ ಸೌಕರ್ಯ ಅಭಿವೃದ್ಧಿ, ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ, ಕೃಷಿ ಉತ್ಪನ್ನಗಳ ಮುಕ್ತ ಮಾರಾಟ ವ್ಯವಸ್ಥೆ ಮುಂತಾದ ಅವಕಾಶಗಳೊಂದಿಗೆ ಈ ಮಸೂದೆಯು ರೈತರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಲಿದೆ ಎಂದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ರೈತಪರ ಸರಕಾರಗಳು ರೈತಾಪಿ ವರ್ಗದ ಶ್ರೇಯೋಭಿವೃದ್ಧಿಗೆ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ರೈತ ಬಂಧುಗಳಿಗೆ ತಲುಪಿಸುವ ಜೊತೆಗೆ ಜಿಲ್ಲಾ ರೈತ ಮೋರ್ಚಾ ರೈತರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿ ಸಾರ್ಥಕ ಸೇವೆಗೈದು ಮಾದರಿ ಮೋರ್ಚಾವಾಗಿ ರೂಪುಗೊಳುವಲ್ಲಿ ಶ್ರಮಿಸಲಿದೆ ಎಂದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ್ ಕಾಂಚನ್, ಧೀರಜ್ ಕೆ.ಎಸ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು ಹಾಗೂ ಜಿಲ್ಲಾ-ಮಂಡಲಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ಮಹೋಹರ್ ಎಸ್. ಕಲ್ಮಾಡಿ ವಂದಿಸಿದರು.