ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ.

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಾರ್ಚ್ 17 ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜ್ಞಾನಸುಧಾ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್. ಎಂ. ಕೊಡವೂರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಜೀವನದಲ್ಲಿ ಕಷ್ಟ ಅಂಥ ಯಾವುದು ಇಲ್ಲ ಅದು ನಾವು ನೋಡುವ ದೃಷ್ಟಿಕೋನದಲ್ಲಿದೆ. ಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟು ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಉಜ್ವಲ ಭವಿಷ್ಯವನ್ನು ಹೊಂದಲು ನಾಂದಿಯಾಗುತ್ತದೆ ಎಂದರು . ಅಧ್ಯಕ್ಷತೆಯನ್ನು ವಹಿಸಿದ ವೆಂಕಟರಮಣ ದೇವ್ ಎಜುಕೇಶನಲ್ & ಕಲ್ಚರಲ್ ಟ್ರಸ್ಟ್ ನ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಯವರು ತಂದೆ, ತಾಯಿ, ಗುರುಗಳಿಗೆ ಗೌರವ ನೀಡಿ ಸಮಾಜದಲ್ಲಿ ಸತ್ಪ್ರಜೆಯಾಗಿ ಯಶಸ್ವಿ ಬದುಕನ್ನು ಸಾಗಿಸಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜೇಯ್ ಕೋಟೆಗಾ‌ರ್, ವೆಂಕಟರಮಣ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಷ್ಮಾ ಡಿಸೋಜಾ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಮೀಳಾ ಡಿಸೋಜಾ, ಹಿರಿಯ ರಸಾಯನ ಶಾಸ್ತ್ರ ಉಪನ್ಯಾಸಕರಾದ ರಮಾಕಾಂತ್ ರೇವಣ್ ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನೆರವೇರಿತು.

ಕಾಲೇಜಿನ ಉಪನ್ಯಾಸಕರು ತಮ್ಮ ಹಿತನುಡಿಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ ಕರಾಟೆ ಪಟು ವಿದ್ಯಾರ್ಥಿ ಅಕ್ಷಯ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ವಿದ್ಯಾರ್ಥಿನಿ ಆಯಿಷಾ ಅಕ್ಸಾ ಸ್ವಾಗತಿಸಿ, ವಿದ್ಯಾರ್ಥಿನಿ ಮಾನ್ಯ ವಂದಿಸಿದರು. ವಿದ್ಯಾರ್ಥಿನಿ ಸುರಕ್ಷಾ ಅತಿಥಿಯನ್ನು ಪರಿಚಯಿಸಿ, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮಂಜುಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.