ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ, ಮಹಿಳಾ ಸೂಪರ್ ಸ್ಟಾರ್ ಎಂದೇ ಕರೆಯಲ್ಪಡುವ ಬಾಹುಬಲಿಯ ದೇವಸೇನೆ ಪಾತ್ರಧಾರಿ ಅನುಷ್ಕಾ ಶೆಟ್ಟಿಗೆ ಇಂದು 41 ನೇ ಹುಟ್ಟುಹಬ್ಬದ ಸಂಭ್ರಮ. ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿಯರಲ್ಲಿ ಒಬ್ಬರಾಗಿರುವ ಅನುಷ್ಕಾ ಪ್ರತಿ ಚಲನಚಿತ್ರಕ್ಕೆ 2 ರಿಂದ 3 ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಿಪಾಡಿ ಗ್ರಾಮದ ತುಳುವ ಬಂಟ ಕುಟುಂಬದ ಪ್ರಫುಲ್ಲ ಶೆಟ್ಟಿ ಮತ್ತು ಎ.ಎನ್.ವಿಟ್ಟಲ್ ಶೆಟ್ಟಿಯವರ ಮೂರು ಮಕ್ಕಳಲ್ಲಿ ಅನುಷ್ಕಾ ಒಬ್ಬರು. ಗುಣರಂಜನ್ ಶೆಟ್ಟಿ(ಬಿಸ್ ನೆಸ್) ಮತ್ತು ಸಾಯಿ ರಮೇಶ್ ಶೆಟ್ಟಿ(ಡಾಕ್ಟರ್) ಎಂಬ ಇಬ್ಬರು ಅಣ್ಣಂದಿರಿದ್ದಾರೆ. ಚಿತ್ರರಂಗಕ್ಕೆ ಬರುವ ಮೊದಲು ಅನುಷ್ಕಾ ಭರತ್ ಠಾಕೂರ್ ಎಂಬವರಲ್ಲಿ ಯೋಗ ಕಲಿತು, ಯೋಗ ತರಬೇತುದಾರರಾಗಿದ್ದರು.
ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಕಂಪ್ಯೂಟರ್ ಅಪ್ಲಿಕೇಷನ್ಸ್ ಪದವಿ ಪಡೆದಿದ್ದಾರೆ. ಆಕೆಯ ಚೊಚ್ಚಲ ಚಿತ್ರ ಸೂಪರ್ ಚಿತ್ರೀಕರಣದ ಸಮಯದಲ್ಲಿ, ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ನಿರ್ಮಾಪಕ ನಾಗಾರ್ಜುನ ಆಕೆಗೆ ಪರದೆಯ ಮೇಲೆ ಬೇರೆ ಹೆಸರನ್ನು ಇಡಲು ಉತ್ಸುಕರಾಗಿದ್ದರು. ಅನುಷ್ಕಾ ಅವರ ನೈಜ ಹೆಸರು ಸ್ವೀಟಿ ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲ ಎಂದು ಅವರು ಭಾವಿಸಿದ್ದ ಕಾರಣ ಹೆಸರನ್ನು ಬದಲಾಯಿಸಿ ಅನುಷ್ಕಾ ಎಂದಿಟ್ಟಿದ್ದರು.
ಅವರು ಮೂರು ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್, ಆಂಧ್ರಪ್ರದೇಶ ರಾಜ್ಯದ ನಂದಿ ಪ್ರಶಸ್ತಿ ಮತ್ತು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿರುವ ಅನುಷ್ಕಾ ಒಟ್ಟು 47 ಚಿತ್ರಗಳಲ್ಲಿ ನಟಿಸಿದ್ದರೂ ಅವರಿಗೆ ಅಪಾರ ಕೀರ್ತಿಯನ್ನು ತಂದುಕೊಟ್ಟಿದ್ದು, ಬಾಹುಬಲಿ ಚಿತ್ರದ ದೇವಸೇನೆಯ ಪಾತ್ರ. ಜೊತೆಗೆ ಎಸ್.ಎಸ್. ರಾಜಮೌಳಿಯವರ ಜೊತೆ ಎರಡನೇ ಬಾರಿ ಕೆಲಸ ಮಾಡಿದ ನಟಿ ಎನ್ನುವ ಹೆಗ್ಗಳಿಕೆಯೂ ಈಕೆಗೆ ಪ್ರಾಪ್ತವಾಗಿದೆ.
ಅನುಷ್ಕಾಗೆ ಕೋಳಿ ಖಾದ್ಯಗಳು ಬಹಳ ಇಷ್ಟೆವೆಂದು ಹೇಳಲಾಗುತ್ತದೆ.
2011 ರಲ್ಲಿ ತೆಲಂಗಾಣದ ಈಕೆಯ ಜುಬಿಲಿ ಹಿಲ್ಸ್ ನ ಮನೆಗೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದು, ಅಧಿಕಾರಿಗಳು ಹಲವಾರು ಕಡತಗಳು, ಪಾಸ್ ಬುಕ್ ಮತ್ತು ನಗದು ಹಣವನ್ನು ವಶಪಡಿಸಿಕೊಂಡಿದ್ದರು ಎಂದು ಮಾಧ್ಯಮ ವರದಿಯಾಗಿತ್ತು.
ಕೃಪೆ: ವೀಕಿಪೀಡಿಯ/ಟ್ವಿಟರ್/ಇಂಟರ್ನೆಟ್