ಎಲ್ಲರಂತೆ ತಾನೂ ಎಂಎಸ್ ಧೋನಿ ಅಭಿಮಾನಿ ಎಂದು ತೋರಿದ ಡೇಲ್ ಸ್ಟೇನ್! ಚೆನ್ನೈ ನಾಯಕನ ಆಟೋಗ್ರಾಫ್ ಪಡೆದ ಹೈದ್ರಾಬಾದ್ ಬೌಲಿಂಗ್ ಕೋಚ್!!

ಭಾರತ ತಂಡದ ಮಾಜಿ ನಾಯಕ, ಎಂಎಸ್ ಧೋನಿ ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಭಾನುವಾರ ಸಂಜೆ (ಮೇ 01), ತಂಡದ ನಾಯಕ ರವೀಂದ್ರ ಜಡೇಜಾ ನಾಯಕ ಸ್ಥಾನದಿಂದ ಕೆಳಗಿಳಿದ ಬಳಿಕ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ತಂಡಕ್ಕೆ ಮರಳಿದ್ದರು. ನಾಲ್ಕು ಬಾರಿಯ ಚಾಂಪಿಯನ್ ತಂಡದ ನಾಯಕ ಐಪಿಎಲ್ 2022 ರ ಆವೃತ್ತಿಯ 46 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪುಣೆಯ ಎಮ್ ಸಿ ಎ ಸ್ಟೇಡಿಯಂನಲ್ಲಿ ಎದುರಿಸಿದರು.

ಭಾನುವಾರ ಸಂಜೆ ನಡೆದ ಐಪಿಎಲ್ ಪಂದ್ಯದಲ್ಲಿ ಸಿ ಎಸ್ ಕೆ ತಂಡವು ಎಸ್ ಆರ್ ಎಚ್ ತಂಡವನ್ನು 13 ರನ್‌ಗಳಿಂದ ಸೋಲಿಸಿದ ನಂತರ, ಮಾಜಿ ನಂ.1 ಟೆಸ್ಟ್ ಬೌಲರ್ ಹೈದರಾಬಾದ್‌ನ ವೇಗದ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಧೋನಿಯ ಬಳಿ ತೆರಳಿ ಆತನ ಆಟೋಗ್ರಾಫ್ ಕೇಳಿ ಪಡೆದರು. ಧೋನಿ ಕೂಡಾ ಬಹಳ ಉತ್ಸಾಹದಿಂದಲೆ ತಮ್ಮ ಆಟೋಗ್ರಾಫ್ ನೀಡಿದರು. 38 ವರ್ಷದ ದಕ್ಷಿಣ ಆಫ್ರಿಕಾದ ಆಟಗಾರ ಸಿ.ಎಸ್.ಕೆ ತಂಡದ ನಾಯಕನ ಬಳಿ ಹೋಗಿ ಅವರ ಆಟೋಗ್ರಾಫ್ ಕೇಳಿರುವುದು ಇಂಟರ್ನೆಟ್ ನಲ್ಲಿ ಸಂಚಲನ ಮೂಡಿಸಿದೆ.

ಧೋನಿಯಂತೆ ಸ್ಟೇಯ್ನ್ ಕೂಡ ಸ್ವತಃ ಕ್ರಿಕೆಟ್ ಆಟದ ದಂತಕಥೆಯಾಗಿದ್ದಾರೆ. ಇಬ್ಬರು ಆಟಗಾರರೂ 22-ಯಾರ್ಡ್ ಕ್ರಿಕೆಟ್ ಸ್ಟ್ರಿಪ್‌ನಲ್ಲಿ ಹಲವಾರು ಬಾರಿ ಮುಖಾಮುಖಿಯಾಗಿದ್ದಾರೆ. ಕ್ರಿಕೆಟ್ ಪ್ರಿಯರು ಇಬ್ಬರ ಆಟವನ್ನೂ ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಭಾರತೀಯ ಸ್ಟಂಪರ್‌ನ ಬಗ್ಗೆ ಸ್ಟೇನ್‌ನ ಗೌರವ ಮತ್ತು ಮೆಚ್ಚುಗೆಯು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದಿದೆ.