ಹುಬ್ಬಳ್ಳಿ: ಸರಳ ವಾಸ್ತು ಮೂಲಕ ಜನಪ್ರಿಯರಾಗಿದ್ದ ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಹೋಟೆಲ್ನಲ್ಲಿ ನಿರ್ಮಮವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಉಣಕಲ್ ಕೆರೆ ಬಳಿಯ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಭಕ್ತರ ಸೋಗಿನಲ್ಲಿ ಬಂದ ಹಂತಕರು ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈಗ ಕೃತ್ಯದ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು ಕೊಲೆಯ ಘೋರತೆ ಅನಾವರಣಗೊಂಡಿದೆ. ಇಬ್ಬರು ವ್ಯಕ್ತಿಗಳು ಹೋಟೆಲ್ ಲಾಬಿಯಲ್ಲಿ ಕುಳಿತಿದ್ದ ಚಂದ್ರಶೇಖರ್ ಗುರೂಜಿಯ ಆಶೀರ್ವಾದ ಪಡೆಯುವಂತೆ ಬಂದು, ಇದ್ದಕ್ಕಿದ್ದಂತೆ ಇಬ್ಬರೂ ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿ ಗುರೂಜಿ ಅವರನ್ನು ಚುಚ್ಚಿ ಸಾಯಿಸುವ ದೃಶ್ಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಂದ್ರಶೇಖರ್ ಗುರೂಜಿಗೆ 60ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿರುವ ತೀವ್ರತೆಯನ್ನು ನೋಡಿದರೆ, ವೈಯಕ್ತಿಕ ವೈಷಮ್ಯದಿಂದಲೇ ಈ ಕೊಲೆ ಮಾಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಕಮೀಷನರ್ ಲಾಬೂರಾಮ್ ಆಗಮಿಸಿದ್ದು, ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಇವರ ಹತ್ಯೆ ಮಾಡಲಾಗಿದೆ ಎನ್ನುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಹೋಟೆಲ್ ನಲ್ಲಿ ರಿಸಪ್ಶನ್ನಲ್ಲಿಯೇ ಚಾಕು ಇರಿದು ಹಂತಕರು ಪರಾರಿಯಾಗಿದ್ದಾರೆ.