ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಮತ್ತು ವಿತರಕ ಕೆ.ಸಿ.ಎನ್ ಚಂದ್ರಶೇಖರ್ ಸೋಮವಾರ ನಿಧನ ಹೊಂದಿದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತಂದೆ ಕೆ.ಸಿ.ಎನ್.ಗೌಡರ ಮಾರ್ಗದರ್ಶನದಲ್ಲಿ ಚಲನಚಿತ್ರ ನಿರ್ಮಾಣ, ಪ್ರದರ್ಶನ, ಚಿತ್ರ ವಿತರಣೆಯಲ್ಲಿ ಅಪಾರ ಅನುಭವಗಳಿಸಿದ್ದರು. ಬೆಂಗಳೂರಿನ ನವರಂಗ್, ಊರ್ವಶಿ ಮತ್ತು ದೊಡ್ಡಬಳ್ಳಾಪುರದ ರಾಜ್ ಕಮಲ್ ಚಿತ್ರಮಂದಿರದ ಮಾಲೀಕರಾಗಿದ್ದರು.
ಐವತ್ತಕ್ಕೂ ಹೆಚ್ಚು ಚಿತ್ರ ನಿರ್ಮಾಣ ಮಾಡಿದ್ದ ಅವರು, ಸೆನ್ಸಾರ್ ಮಂಡಳಿ ಸದಸ್ಯರಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ದಾರಿ ತಪ್ಪಿದ ಮಗ, ಹುಲಿಯ ಹಾಲಿನ ಮೇವು, ಬಬ್ರುವಾಹನ ಮತ್ತಿತರ ಚಿತ್ರಗಳನ್ನು ನಿರ್ಮಿಸಿದ್ದರು. ಸುಮಾರು 500 ಚಿತ್ರಗಳ ವಿತರಣೆ ಮಾಡಿದ್ದರು.
ಪನೋರಮಾ ವಿಭಾಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿ ತೀರ್ಪುಗಾರಾಗಿ, ಮುಂಬೈನ ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೂರು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.