ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸನ್ನದುದಾರರಿಂದ ಪ್ರತಿಭಟನೆ: ನಕಲಿ ಮದ್ಯ ಮಾರಾಟ ಜಾಲದಿಂದ ಸನ್ನದುದಾರರಿಗೆ ಅಪಾರ ನಷ್ಟ- ಗೋವಿಂದರಾಜ್ ಹೆಗ್ಡೆ

ಉಡುಪಿ: ರಾಜ್ಯದಲ್ಲಿ ನಕಲಿ ಮದ್ಯ ಮಾರಾಟದ ಹಾವಳಿ ಹೆಚ್ಚಾಗಿದ್ದು, ಇದರಿಂದ ಸರ್ಕಾರದ ಖಜಾನೆಗೆ ಹಾಗೂ ಸನ್ನದುದಾರರಿಗೆ ಅಪಾರ ನಷ್ಟ ಆಗುತ್ತಿದೆ ಎಂದು ಫೆಡರೇಶನ್ ಆಪ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ ಬಿ. ಗೋವಿಂದರಾಜ್ ಹೆಗ್ಡೆ ಆರೋಪಿಸಿದ್ದಾರೆ.

ಸನ್ನದುದಾರರ ವಿವಿಧ ಬೇಡಿಕೆ ಈಡೇರಿಕೆ ಮತ್ತು ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು.

ಮಿಲಿಟರಿ ಕ್ಯಾಂಟಿನ್ ಸ್ಟೋರ್‌ಗಳ ಹೆಸರಿನಲ್ಲಿ ಹೊರ ರಾಜ್ಯಗಳಿಂದ ನಕಲಿ ಮದ್ಯ ಸರಬರಾಜು ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬೀಡಾ ಅಂಗಡಿ, ಮಾಂಸಾಹಾರಿ ಹೊಟೇಲ್, ದಿನಸಿ ಅಂಗಡಿ, ಡಾಬಾಗಳಲ್ಲಿ ನಕಲಿ ಮದ್ಯ ಮಾರಾಟ ಆಗುತ್ತಿದೆ ಎಂದು ದೂರಿದರು.

ನಕಲಿ ಮದ್ಯ ಮಾರಾಟದ ಹಾವಳಿ ತಡೆಯಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ತಂಡ ರಚಿಸಿ ಕಠಿಣ ಕ್ರಮ ಕೈಗೊಳ್ಳೇಕು ಎಂದು ಅವರು ಒತ್ತಾಯಿಸಿದರು.

ಆನ್‌ಲೈನ್ ಮೂಲಕ ಮದ್ಯ ಮಾರಾಟ ಮಾಡುವ ಪ್ರಸ್ತಾವವನ್ನು ಸರ್ಕಾರ ಕೈಬಿಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಸಿ.ಎಲ್-6ಎ ಮತ್ತು 7 ಸನ್ನದುಗಳನ್ನು ಪ್ರಾರಂಭಿಸಲು ನೀಡಿರುವ ಆದೇಶವನ್ನು ರದ್ದುಗೊಳಿಸಿ, 2018ರ ನಂತರ ನೀಡಿರುವ ಸಿ.ಎಲ್-7 ಸನ್ನದುಗಳನ್ನು ವಿಶೇಷವಾಗಿ ಮರುತನಿಖೆ ಮಾಡಲು ಸಮಿತಿಯನ್ನು ರಚಿಸಬೇಕು. ಈ ಸಮಿತಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಿಗೆ ಸದಸ್ಯತ್ವ ನೀಡಬೇಕು ಎಂದು ಅವರು ಆಗ್ರಹಿಸಿದರು.

ಕೋಟಾ ನಿಗದಿ ಮಾಡದೆ ನೀಡಿರುವ ಎಂ.ಎಸ್.ಐ.ಎಲ್. ಅಂಗಡಿಗಳನ್ನು ಸ್ಥಗಿತಗೊಳಿಸಬೇಕು. ಕೋವಿಡ್ ಲಾಕ್‌ಡೌನ್‌ನಿಂದ ನಷ್ಟದಲ್ಲಿರುವ ಉದ್ಯಮ ವಲಯಕ್ಕೆ ಪರಿಹಾರ ಘೋಷಿಸಬೇಕು. ಹೆಚ್ಚಳ ಮಾಡಿರುವ ಅಬಕಾರಿ ಶುಲ್ಕವನ್ನು ಕೈಬಿಡಬೇಕು. ಚಿಲ್ಲರೆ ಮದ್ಯ ಮಾರಾಟಗಾರರಿಗೆ ಲಾಭಾಂಶವನ್ನು ಶೇ.20 ನೀಡಬೇಕು. ಎಲ್ಲಾ ವಲಯದ ಸನ್ನದುಗಳಿಗೆ ಏಕರೂಪದ ಸನ್ನದು ಶುಲ್ಕ ವಿಧಿಸಬೇಕು ಎಂದು ಹೇಳಿದರು.

ಬಜೆಟ್‌ಗೆ ಮೊದಲು ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿಗಳು ಕೂಡಲೇ ಸಭೆ ಕರೆಯಬೇಕು. ಇಲ್ಲದಿದ್ದರೆ ಬಜೆಟ್ ಅಧಿವೇಶನದ ಸಂದರ್ಭ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳಿಂದ ಲಂಚದ ಕಿರುಕುಳ:
ಅಬಕಾರಿ ಅಧಿಕಾರಿಗಳು ಲಂಚ-ಮಾಮೂಲಿ ವಸೂಲಿಗಾಗಿ ಸನ್ನದುದಾರರಿಗೆ ತೊಂದರೆ ನೀಡುತ್ತಿದ್ದಾರೆ. ಪೊಲೀಸ್ ಇಲಾಖೆಯ ಹಸ್ತಕ್ಷೇಪ ಕೂಡ ಹೆಚ್ಚಾಗಿದೆ. ಹಬ್ಬ ಹರಿದಿನಗಳಲ್ಲಿಯೂ ಅನಗತ್ಯವಾಗಿ ಸನ್ನದುಗಳನ್ನು ಬಂದ್ ಮಾಡಲಾಗುತ್ತಿದೆ. ಆ ಮೂಲಕ ಅಬಕಾರಿ ಕಾಯ್ದೆಯನ್ನು ಸಂಪೂರ್ಣವಾಗಿ ದುರುಪಯೋಗ ಮಾಡಲಾಗುತ್ತಿದೆ. ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು. ಅಬಕಾರಿ ಅಧಿಕಾರಿಗಳ ಬೇನಾಮಿ ಆಸ್ತಿ ಮತ್ತು ಬೇನಾಮಿ ಸನ್ನದುಗಳ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿ.ಗೋವಿಂದರಾಜ್ ಹೆಗ್ಡೆ ಆಗ್ರಹಿಸಿದರು.

ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಫೆಡರೇಶನ್ ರಾಜ್ಯ ಸಮಿತಿ ಸದಸ್ಯ ಮನೋಹರ್ ಶೆಟ್ಟಿ, ಉಡುಪಿ ತಾಲೂಕು ಅಧ್ಯಕ್ಷ ಮಿಥುನ್ ಆರ್. ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ಜನಾರ್ದನ ಪೂಜಾರಿ, ಕಾರ್ಕಳ ತಾಲೂಕು ಅಧ್ಯಕ್ಷ ಶೋದರ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು