ಸುಳ್ಳು ಕೇಸ್ ದಾಖಲಿಸಿ  ರಿಕ್ಷಾ ಚಾಲಕರ ಶಾಂತಿಯನ್ನು ಕದಡುವ ಯತ್ನ :ಆರೋಪ

ಉಡುಪಿ : ಅನೇಕ ಅಧಿಕೃತ ನೋಂದಾಯಿತ ರಿಕ್ಷಾ ನಿಲ್ದಾಣಗಳಲ್ಲಿ ಪರವಾನಿಗೆಗಳಿಲ್ಲದ, ಅನಧಿಕೃತ ರಿಕ್ಷಾ ಚಾಲಕರು ಬಂದು ಬೇಕಾಬಿಟ್ಟಿಯಾಗಿ ಬಾಡಿಗೆಗಳನ್ನು ಮಾಡುತ್ತಿದ್ದು ಅಧಿಕೃತ ರಿಕ್ಷಾ ಚಾಲಕ ಮಾಲಕರಿಗೆ ಉಪಟಳ ನೀಡುತ್ತಿರುವುದಲ್ಲದೆ ಅವರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಸುಳ್ಳು ಕೇಸುಗಳನ್ನು ದಾಖಲಿಸಿ  ರಿಕ್ಷಾ ಚಾಲಕರ ಶಾಂತಿಯನ್ನು ಕದಡುವ ಯತ್ನ ನಡೆಸಲಾಗುತ್ತಿದೆ ಎಂದು ಜಿಲ್ಲಾ ರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ ಅಮೀನ್ ಆರೋಪಿಸಿದ್ದಾರೆ.

 ಅವರು ಬುಧವಾರ ಉಡುಪಿ ಠಾಣೆಯಲ್ಲಿ ತಮ್ಮ ಸಂಘಟನೆಗಳ ಒಕ್ಕೂಟದ ಸದಸ್ಯರ ಮೇಲಿನ ಸುಳ್ಳು ಆಪಾದನೆಗಳ ಬಗ್ಗೆ ನಗರ ಠಾಣಾಧಿಕಾರಿಗಳ ಜೊತೆ ಸಮಾಲೋಚನೆಯ ಸಂದರ್ಭದಲ್ಲಿ ಈ ವಿಷಯವನ್ನು ತಿಳಿಸಿದರು.

ನಿರಂತರ ದೌರ್ಜನ್ಯಕ್ಕೆ ಕೊನೆ ಇಲ್ಲವೇ?

ಕಳೆದ ಕೆಲವು ತಿಂಗಳಿಂದ ಈ ಅಂತಃಕಲಹ ನಡೆಯುತ್ತಿದ್ದು ಸಂಘಟನೆಯ ಸದಸ್ಯರು ಅತ್ಯಂತ ಸಂಯಮದಿಂದ ವರ್ತಿಸಿ ಶಾಂತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ, ಆದರೆ ತಮ್ಮ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದು, ಜಾತೀಯ ಸಂಘಟನೆಗಳ ಹೆಸರನ್ನು ದುರ್ಬಳಕೆ ಮಾಡಿ ಸುಳ್ಳು ಕೇಸುಗಳನ್ನು ದಾಖಲಿಸಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ನಡೆಸಬೇಕಾದೀತು ಎಂದವರು ಎಚ್ಚರಿಸಿದರು.  ಒಕ್ಕೂಟದ ಅಧ್ಯಕ್ಷ ಮಹೇಶ್ ಠಾಕೂರ್ ಅವರು ಮಧ್ಯಪ್ರವೇಶಿಸಿ ಠಾಣಾಧಿಕಾರಿಯವರ ಜೊತೆ ಸಮಾಲೋಚನೆ ನಡೆಸಿ ರಿಕ್ಷಾ ಚಾಲಕ ಮಾಲಕರ ನಡುವೆ ಇರುವ ಗೊಂದಲಗಳನ್ನು ಶಾಸಕ ರಘುಪತಿ ಭಟ್ ಅವರ ಮಧ್ಯಸ್ಥಿಕೆಯಲ್ಲಿ ಪರಿಹರಿಸುವ ಬಗ್ಗೆ ಭರವಸೆ ನೀಡಿದರು.