ಫೇಸ್ಬುಕ್, ವಾಟ್ಸಾಪ್ ಬಳಕೆಗೂ ಶುಲ್ಕ ಕೊಡ್ಬೇಕು, ಏನ್ ಮಾಡೋಕೆ ಹೊರಟಿದೆ Meta !

ಹೆಚ್ಚುವರಿ ಸೌಲಭ್ಯಕ್ಕೆ ಹಣ ಕೊಡಿ:

ಸಾಮಾನ್ಯವಾಗಿ ಬಳಕೆದಾರರು ಈಗ ಬಳಸುತ್ತಿರುವ Facebook, Instagram ಮತ್ತು WhatsApp ಸೇವೆಗಳು ಎಂದಿನಂತೆ ಉಚಿತವಾಗಿಯೇ ಮುಂದುವರಿಯಲಿವೆ. ಆದರೆ ಹೆಚ್ಚುವರಿ ಸೌಲಭ್ಯಗಳು ಮತ್ತು ವಿಶೇಷ ವೈಶಿಷ್ಟ್ಯಗಳನ್ನು ಬಯಸುವ ಬಳಕೆದಾರರು ಹಣ ಪಾವತಿಸಿ ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಈ ಯೋಜನೆ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಕಂಟೆಂಟ್ ಕ್ರಿಯೇಟರ್‌ಗಳು, ಇನ್‌ಫ್ಲುವೆನ್ಸರ್‌ಗಳು ಮತ್ತು ವೃತ್ತಿಪರ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.

ಮೆಟಾ ಸಂಸ್ಥೆಯು Facebook Plus ಮತ್ತು Instagram Plus ಹೆಸರಿನ ಚಂದಾದಾರಿಕೆಯನ್ನು ತಿಂಗಳಿಗೆ ಸುಮಾರು ₹330 ದರದಲ್ಲಿ ಪರಿಚಯಿಸಿದೆ. ಈ ಚಂದಾದಾರಿಕೆಯನ್ನು ಪಡೆಯುವವರಿಗೆ ಹಲವು ವಿಶೇಷ ಸೌಲಭ್ಯಗಳು ದೊರೆಯಲಿವೆ. ತಮ್ಮ ಸ್ಟೋರಿಗಳನ್ನು 24 ಗಂಟೆಗಳಿಗಿಂತ ಹೆಚ್ಚು ಸಮಯ ಉಳಿಸಿಕೊಳ್ಳುವ ಅವಕಾಶ, ಇತರರ ಸ್ಟೋರಿಗಳನ್ನು ಅವರಿಗೆ ತಿಳಿಯದಂತೆ ವೀಕ್ಷಿಸುವ ಸೌಲಭ್ಯ, ಸ್ಟೋರಿ ಎಷ್ಟು ಬಾರಿ ಮರು ವೀಕ್ಷಿಸಲಾಗಿದೆ ಎಂಬ ಮಾಹಿತಿ ಸೇರಿದಂತೆ ಹಲವು ಹೆಚ್ಚುವರಿ ಆಯ್ಕೆಗಳು ಲಭ್ಯವಾಗಲಿವೆ. ಅಲ್ಲದೆ ವಾರಕ್ಕೊಮ್ಮೆ ಸ್ಟೋರಿಯನ್ನು ಹೆಚ್ಚು ಜನರಿಗೆ ತಲುಪಿಸಲು ‘ವೀಕ್ಲಿ ಸ್ಪಾಟ್‌ಲೈಟ್’ ಸೌಲಭ್ಯವೂ ದೊರೆಯಲಿದೆ.

ಇದರ ಜೊತೆಗೆ ಪ್ರೀಮಿಯಂ ಬಳಕೆದಾರರಿಗೆ ವಿಶೇಷ ಪ್ರೊಫೈಲ್ ವಿನ್ಯಾಸ, ಆಕರ್ಷಕ ಬಯೋ ಫಾಂಟ್‌ಗಳು, ವಿಭಿನ್ನ ಆ್ಯಪ್ ಐಕಾನ್‌ಗಳು, ಪ್ರೀಮಿಯಂ ಅನಿಮೇಟೆಡ್ ರಿಯಾಕ್ಷನ್‌ಗಳು ಹಾಗೂ ಪ್ರಮುಖ ಪೋಸ್ಟ್‌ಗಳನ್ನು ಪ್ರೊಫೈಲ್‌ನಲ್ಲಿ ಪಿನ್ ಮಾಡುವಂತಹ ಹೆಚ್ಚುವರಿ ಆಯ್ಕೆಗಳೂ ಲಭ್ಯವಾಗಲಿವೆ.

‘WhatsApp Plus’

WhatsApp ಬಳಕೆದಾರರಿಗಾಗಿ ‘WhatsApp Plus’ ಎಂಬ ಪ್ರತ್ಯೇಕ ಚಂದಾದಾರಿಕೆಯನ್ನು ತಿಂಗಳಿಗೆ ₹250 ದರದಲ್ಲಿ ಪರಿಚಯಿಸಲಾಗಿದೆ. ಈ ಯೋಜನೆಯಡಿ ಬಳಕೆದಾರರು ಹೊಸ ಥೀಮ್‌ಗಳು, ವೈವಿಧ್ಯಮಯ ಚಾಟ್ ಬ್ಯಾಕ್‌ಗ್ರೌಂಡ್‌ಗಳು, ವಿಶೇಷ ಅನಿಮೇಟೆಡ್ ಸ್ಟಿಕ್ಕರ್‌ಗಳು ಮತ್ತು ರಿಯಾಕ್ಷನ್ ಪ್ಯಾಕ್‌ಗಳನ್ನು ಬಳಸಬಹುದಾಗಿದೆ. ಜೊತೆಗೆ ಪ್ರತಿ ಕಾಂಟ್ಯಾಕ್ಟ್ ಅಥವಾ ಗ್ರೂಪ್‌ಗೆ ಪ್ರತ್ಯೇಕ ರಿಂಗ್‌ಟೋನ್‌ಗಳನ್ನು ಹೊಂದಿಸುವ ಅವಕಾಶವೂ ದೊರೆಯಲಿದೆ. ಮುಖ್ಯ ಚಾಟ್‌ಗಳನ್ನು ಸುಲಭವಾಗಿ ನಿರ್ವಹಿಸಲು ಹೆಚ್ಚಿನ ಪಿನ್ ಆಯ್ಕೆಗಳು ಮತ್ತು ಚಾಟ್ ವರ್ಗೀಕರಣ ಸೌಲಭ್ಯಗಳನ್ನೂ ನೀಡಲಾಗಿದೆ.

ಇದರ ನಡುವೆ ಮೆಟಾ ತನ್ನ ಕೃತಕ ಬುದ್ಧಿಮತ್ತೆ ಸೇವೆಗಳಿಗಾಗಿ ‘Meta One Plus’ ಮತ್ತು ‘Meta One Premium’ ಎಂಬ ಹೊಸ ಯೋಜನೆಗಳನ್ನೂ ರೂಪಿಸುತ್ತಿದೆ. ಈ ಯೋಜನೆಗಳ ಮೂಲಕ ಬಳಕೆದಾರರು Meta AI ಜೊತೆಗೆ ಹೆಚ್ಚಿನ ಮಟ್ಟದ ಸಂವಹನ ನಡೆಸಲು ಸಾಧ್ಯವಾಗಲಿದ್ದು, ಸಂಕೀರ್ಣ ಪ್ರಶ್ನೆಗಳಿಗೆ ಉತ್ತರ ಪಡೆಯುವುದು, ಗುಣಮಟ್ಟದ ಚಿತ್ರ ಹಾಗೂ ವಿಡಿಯೊಗಳನ್ನು ರಚಿಸುವುದು ಸೇರಿದಂತೆ ಹಲವು ಸುಧಾರಿತ AI ಸೇವೆಗಳನ್ನು ಪಡೆಯಲಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ಈ ಹೊಸ ಚಂದಾದಾರಿಕೆ ಯೋಜನೆಗಳು ‘Meta Verified’ ಸೇವೆಯಿಂದ ಸಂಪೂರ್ಣ ಭಿನ್ನವಾಗಿವೆ. ಈ ಯೋಜನೆಗಳ ಮೂಲಕ ಬಳಕೆದಾರರಿಗೆ ಬ್ಲೂ-ಟಿಕ್ ಅಥವಾ ಖಾತೆ ಪರಿಶೀಲನೆ ಸೌಲಭ್ಯ ದೊರೆಯುವುದಿಲ್ಲ. ಬದಲಾಗಿ, ಇದು ಕೇವಲ ಹೆಚ್ಚುವರಿ ವೈಶಿಷ್ಟ್ಯಗಳು ಮತ್ತು ಉತ್ತಮ ಬಳಕೆದಾರ ಅನುಭವಕ್ಕಾಗಿ ರೂಪಿಸಲಾದ ಪ್ರೀಮಿಯಂ ಸೇವೆಯಾಗಿದೆ.

ಮೆಟಾ ಸಂಸ್ಥೆಯ ಈ ಹೊಸ ಚಂದಾದಾರಿಕೆ ಸೇವೆಗಳು ಮೇ 27ರಿಂದ ಜಾಗತಿಕ ಮಟ್ಟದಲ್ಲಿ ಜಾರಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಮತ್ತಷ್ಟು ವೈಯಕ್ತಿಕ ಮತ್ತು ಸುಧಾರಿತವಾಗಿಸಲು ಸಹಕಾರಿಯಾಗಲಿವೆ. ಉಚಿತ ಸೇವೆಗಳು ಎಂದಿನಂತೆ ಮುಂದುವರಿಯಲಿದ್ದು, ಹೆಚ್ಚುವರಿ ಸೌಲಭ್ಯಗಳನ್ನು ಬಯಸುವವರು ಮಾತ್ರ ಈ ಚಂದಾದಾರಿಕೆ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.