ಹೆಚ್ಚುತ್ತಿದೆ Face App ಹುಚ್ಚು: ಅನುಮಾನ ಮೂಡಿಸಿದೆ App ನ ಷರತ್ತು!!

“ನೀನು ಅಜ್ಜ ಆದ್ರೂ ಭಾರೀ ಚೆಂದಾಗಿ ಕಾಣ್ತಿದ್ದಿ ಮಾರಾಯ”.”ನೀ ಅಜ್ಜಿಯಾದ್ರೂ ಸಖತ್ ಸುಂದರಿಯಾಗಿ ಕಾಣ್ತಿ” ಅಂತೆಲ್ಲಾ ತಮ್ಮ ಗೆಳೆಯರ  ಕುರಿತ ಸ್ಟೇಟಸ್ ಗಳು, ಪೋಸ್ಟ್ ಗಳನ್ನು ಅವರಿಗೆ ವಯಸ್ಸಾದಂತೆ ಕಾಣುವ ಚಿತ್ರಗಳೊಂದಿಗೆ ಹಾಕುತ್ತಿರುವುದು ನೀವು ಮೊನ್ನೆಯಿಂದ ಈ ಕ್ಷಣದವರೆಗೂ ನೋಡೇ ಇರುತ್ತೀರ ಬಿಡಿ. ಇದೆಲ್ಲಾ FaceApp ಮಹಿಮೆ ಮಾರಾರ್ರೆ ಅಂತ ಉದ್ಗಾರ ತೆಗೆಯುತ್ತಿದ್ದೀರಾ?

ಯಸ್ ಕರೆಕ್ಟ್. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ, ವಯಸ್ಸಿಗೆ ಅನುಗುಣವಾಗಿ ವ್ಯಕ್ತಿಯ ಚಿತ್ರ ಸಿದ್ಧಪಡಿಸುವ FaceApp  ರಾತ್ರೋ ರಾತ್ರಿ ಫೇಮಸ್ ಆಗಿಬಿಟ್ಟಿದೆ. ಈ ಆ್ಯಪ್ ನ ಮಹಿಮೆಗೆ, ಻ಇದು ತಮ್ಮ ಚಿತ್ರವನ್ನು ಪ್ರಾಯ ಸಂದವರಂತೆ, ಮುದುಕರಾದಂತೆ ತೆಗೆಯುತ್ತಿರೋದನ್ನು ನೋಡಿದವರು ಆ್ಯಪ್ ಗೆ ಸಖತ್ ಫಿದಾ ಆಗಿದ್ದಾರೆ.

ತುಂಬಾ ಮಂದಿ ತಾವು ಭೂತಕಾಲದಲ್ಲಿ ಹೇಗಿದ್ದೆವೆಂದು ನೋಡುವ ಕುತೂಹಲವಾದರೆ ಹಳೆ ಚಿತ್ರಗಳನ್ನೋ, ಯಾವತ್ತೋ ಕ್ಲಿಕ್ಕಿಸಿದ ಚಿತ್ರಗಳನ್ನೋ ನೋಡಿ ಖುಷಿಪಡುತ್ತಾರೆ. ಆದರೆ ತಮಗೆ 50 ವರ್ಷ ಸಂದಾಗ  ನಾವು ಹೇಗಿರಬಹುದು? ಎನ್ನುವ ಕುತೂಹಲವನ್ನು ತಣಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಫೇಸ್ ಅ್ಯಪ್ ಕೈಗೆ ಸಿಕ್ಕಿದ್ದೇ ಅದನ್ನೆಲ್ಲಾ ಇನ್ಸ್ಟಾಲ್ ಮಾಡಿ  50 ವರ್ಷಗಳಾದ ಮೇಲೆ ನಾನು ಹೀಗಿರಬಹುದಾ?ಎನ್ನುವ ಒಕ್ಕಣೆ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಮ್ಮ ಫೋಟೋ ಹಾಕಿ ಖುಷಿಪಟ್ಟವರು ಲಕ್ಷಾಂತರ ಮಂದಿ.

ಆದರೆ ಕೆಲವೇ ಕೆಲ ದಿನಗಳಲ್ಲಿ ರಷ್ಯಾದ ಈ ಆ್ಯಪ್ ನೂರಾರು ಮಿಲಿಯನ್ ಸಂಖ್ಯೆಯಲ್ಲಿ ಇನ್ಸ್ಟಾಲ್ ಆಗಿದೆ. ಆ ಮೂಲಕ ನೂರಾರು ಮಿಲಿಯನ್ ಬಳಕೆದಾರರ ಹೆಸರು, ಭಾವಚಿತ್ರಗಳನ್ನು FaceApp ಈಗಾಗಲೇ ಸಂಗ್ರಹಿಸಿದ್ದು ದಾಖಲೆಯಾಗಿದೆ.

ಭಯ ಏನಪ್ಪಾ ಅಂದ್ರೆ,  FaceAppನ ಕೆಲವು ನಿಯಮ ಮತ್ತು ನಿಬಂಧನೆಗಳು ಬಳಕೆದಾರರಲ್ಲಿ ಆತಂಕ ಹುಟ್ಟುಹಾಕಿದೆ. ಕಾರಣವಿಷ್ಟೇ FaceApp ಇನ್ಸ್ಟಾಲ್ ಮಾಡುವಾಗ ಈ ಕೆಲವೊಂದು ನಿಬಂಧನೆಗಳು ಕಾಣಿಸಿಕೊಳ್ಳುತ್ತಿವೆ. ಆ ನಿಬಂಧನೆಗಳನ್ನು ಒಪ್ಪಿಕೊಳ್ಳುವುದು ಕಡ್ಡಾಯ. ಇಲ್ಲದಿದ್ದರೆ ಇನ್ಸ್ಟಾಲ್ ಆಗಲ್ಲ ಎನ್ನುವುದು ಒಂದು ಕಾರಣವಾದರೆ, ಆ್ಯಪ್ ಬಳಸುವಾಗ ಬಳಕೆದಾರರು ಕೊಡುವ ಮಾಹಿತಿಯನ್ನು FaceApp ಯಾವಾಗ ಬೇಕಾದರೂ, ಹೇಗೆ ಬೇಕಾದರೂ, ಯಾವ ಸಮಯದಲ್ಲಿ ಬೇಕಾದರೂ  ಬಳಸಿಕೊಳ್ಳಬಹುದು ಎಂಬ ಶರತ್ತನ್ನು ನೀಡಿರುವುದು ಸಾರ್ವಜನಿಕರ ವೈಯಕ್ತಿಕ ಬದುಕಿಗೆ ತೊಂದರೆಯುಂಟುಮಾಡುವುದಿಲ್ಲವೇ ಎನ್ನುವ ಗುಮಾನಿಯೇ ಭಯಹುಟ್ಟಿಸಲು ಕಾರಣವಾಗಿದೆ.