ನವದೆಹಲಿ: ಐಫೋನ್ ನಿಮ್ಮ ಬಳಿಯಿಲ್ಲದಿದ್ದರೆ ಜೀವನವೇ ವೇಸ್ಟ್, ಬೇರೆಲ್ಲಾ ಫೋನುಗಳು ಐ ಫೋನ್ ಮುಂದೆ ವೇಸ್ಟ್ ಎನ್ನುವ ಜನರ ಮನಸ್ಥಿತಿ ಇನ್ನಷ್ಟು ಅತಿರೇಕಕ್ಕೆ ಹೋಗುತ್ತಿದೆ. ಐ ಫೋನ್ ಗಾಗಿ ಏನು ಬೇಕಾದರೂ ಮಾಡ್ತೇವೆ ಎನ್ನುವವರು ಇದ್ದಾರೆ. ಇದೀಗ ಇಲ್ಲೊಬ್ಬ ಪತಿ, ಕಷ್ಟಕ್ಕೆ ಕೈಹಿಡಿಯುತ್ತಿದ್ದ ಚಿನ್ನವನ್ನೇ ಮಾರಿ ಐ ಪೋನ್ ಆಸೆಗೆ ಬಿದ್ದು ಪತ್ನಿಗಾಗಿ ಶೋಕಿಯ ಫೋನ್ ಖರೀದಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾನೆ
ಹೌದು ಪತ್ನಿಗೆ ಐಫೋನ್ 18 ಪ್ರೊ ಉಡುಗೊರೆಯಾಗಿ ನೀಡಲು ಪತಿಯೊಬ್ಬರು ಚಿನ್ನವನ್ನೇ ಮಾರಿ, ಗಂಟೆಗಟ್ಟಲೆ ಆ್ಯಪಲ್ ಸ್ಟೋರ್ ಮುಂದೆ ಕಾದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಐಫೋನ್ 18 ಪ್ರೊ ಬಿಡುಗಡೆಯಾದ ಬಳಿಕ ಅದರ ಬೆಲೆ ದುಬಾರಿಯಾಗಿದ್ದರೂ, ಹೊಸ ಫೋನ್ ಖರೀದಿಸಲು ಗ್ರಾಹಕರ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಆ್ಯಪಲ್ ಸ್ಟೋರ್‌ಗಳು ತೆರೆಯುವ ಮುನ್ನವೇ ಗ್ರಾಹಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಫೋನ್ ಖರೀದಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ದೆಹಲಿಯ ನೋಯ್ಡಾದ ಡಿಎಲ್‌ಎಫ್ ಮಾಲ್ ಆಫ್ ಇಂಡಿಯಾದಲ್ಲಿರುವ ಆ್ಯಪಲ್ ಸ್ಟೋರ್‌ನಲ್ಲೂ ಹೊಸ ಐಫೋನ್ ಖರೀದಿಸಲು ಬೆಳಗ್ಗೆಯೇ ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು ಸಾಲಿನಲ್ಲಿ ನಿಂತಿದ್ದರು. ಬೆಳಗ್ಗೆ 8 ಗಂಟೆ ವೇಳೆಗೆ ಅಂಗಡಿ ಮುಂದೆ ಉದ್ದನೆಯ ಕ್ಯೂ ನಿರ್ಮಾಣವಾಗಿತ್ತು.
ಈ ಸಾಲಿನಲ್ಲಿ ನಿಂತಿದ್ದ ದೆಹಲಿಯ ವ್ಯಕ್ತಿಯೊಬ್ಬರು, ತಮ್ಮ ಪತ್ನಿಗೆ ಉಡುಗೊರೆಯಾಗಿ ಐಫೋನ್ 18 ಪ್ರೊ ಖರೀದಿಸಲು ಬಂದಿರುವುದಾಗಿ ತಿಳಿಸಿದ್ದಾರೆ.
ಖಾಸಗಿ ಮಾಧ್ಯಮವೊಂದರೊಂದಿಗೆ ಮಾತನಾಡಿದ ಅವರು, “ನನ್ನ ಪತ್ನಿಗೆ ಬರ್ಗಂಡಿ ಬಣ್ಣದ ಐಫೋನ್ ಬೇಕು. ಆಕೆ ಇದುವರೆಗೆ ಐಫೋನ್ ಬಳಸಿಲ್ಲ. ನನ್ನ ಬಳಿ ಫೋನ್ ಖರೀದಿಸಲು ಸಾಕಷ್ಟು ಹಣ ಇರಲಿಲ್ಲ. ಹಾಗಾಗಿ ಚಿನ್ನ ಮಾರಿ ಆಕೆಗೆ ಐಫೋನ್ ಕೊಡಿಸುತ್ತಿದ್ದೇನೆ. ಆಕೆ ಮೊದಲ ಬಾರಿಗೆ ಐಫೋನ್ ಬಳಸುತ್ತಿರುವುದರಿಂದ, ಆಕೆಗೆ ಇಷ್ಟವಾದ ಆವೃತ್ತಿಯನ್ನೇ ಕೊಡಿಸಬೇಕು ಎಂದುಕೊಂಡಿದ್ದೇನೆ” ಎಂದು ಹೇಳಿದ್ದಾರೆ.















