ನವದೆಹಲಿ: ಕೇಂದ್ರ ಸರ್ಕಾರವು 1.89 ಕೋಟಿ ಅಂತ್ಯೋದಯ ಅನ್ನ ಯೋಜನೆ (AAY) ಕುಟುಂಬಗಳಿಗೆ ಪಡಿತರ ಅಂಗಡಿಗಳ ಮೂಲಕ ಎರಡು ವರ್ಷಗಳವರೆಗೆ ಸಕ್ಕರೆಯ ಸಬ್ಸಿಡಿ ಯೋಜನೆಯನ್ನು ವಿಸ್ತರಿಸಲು ಅನುಮೋದನೆ ನೀಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಸಾರ್ವಜನಿಕ ವಿತರಣಾ ಯೋಜನೆ (ಪಿಡಿಎಸ್) ಮೂಲಕ ವಿತರಿಸಲಾದ ಎಎವೈ ಕುಟುಂಬಗಳಿಗೆ ಸಕ್ಕರೆ ಸಬ್ಸಿಡಿ ಯೋಜನೆಯನ್ನು ಮಾರ್ಚ್ 31, 2026 ರವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.
ಈ ಅನುಮೋದನೆಯೊಂದಿಗೆ, ಸರ್ಕಾರವು ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದು ಕೆಜಿಯಂತೆ ಪಿಡಿಎಸ್ ಮೂಲಕ ಎ.ಎ.ವೈ ಕುಟುಂಬಗಳಿಗೆ ಸಕ್ಕರೆ ವಿತರಿಸಲು ಭಾಗವಹಿಸುವ ರಾಜ್ಯಗಳಿಗೆ ಪ್ರತಿ ಕೆಜಿಗೆ ರೂ.18.50 ಸಬ್ಸಿಡಿ ನೀಡುವುದನ್ನು ಮುಂದುವರಿಸುತ್ತದೆ. ಸುಮಾರು 1.89 ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಕೇಂದ್ರವು ಈಗಾಗಲೇ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PM-GKAY) ಅಡಿಯಲ್ಲಿ ಉಚಿತ ಪಡಿತರವನ್ನು ನೀಡುತ್ತಿದೆ. ಇದರ ಜೊತೆಗೆ ಸಬ್ಸಿಡಿ ದರದಲ್ಲಿ ಅಕ್ಕಿ, ಬೇಳೆ, ಟೊಮೆಟೋ, ನೀರುಳ್ಳಿ ಮುಂತಾದ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ.
















