ಬೆಂಗಳೂರು: ಭಾರತ ಹಾಗೂ ಚೀನಾದ ಮಧ್ಯೆ ಗಡಿ ವಿವಾದಕ್ಕೆ ಸಂಬಂಧಿಸಿ ನಡೆದ ಸಂಘರ್ಷವು ಇದೀಗ ಚೀನಾ ವಹಿವಾಟಿನ ಮೇಲೆ ದೊಡ್ಡ ನೀಡಿದ್ದು, ದೇಶದಲ್ಲಿ ಚೀನಾ ಉತ್ಪನ್ನಗಳ ವಿರುದ್ಧ ದೊಡ್ಡ ಮಟ್ಟಿನ ಆಕ್ರೋಶ ವ್ಯಕ್ತವಾಗಿದೆ. ಹಲವರು ಚೀನಾ ಆ್ಯಪ್ಗಳನ್ನು ಅನ್ಇನ್ಸ್ಟಾಲ್ ಮಾಡುತ್ತಿದ್ದು, ಇದರಿಂದ ದೇಶಿಯ ಆ್ಯಪ್ಗಳಿಗೆ ಅದೃಷ್ಟ ಕುಲಾಯಿಸಿದೆ.
ಬಹುಜನಪ್ರಿಯ ಆ್ಯಪ್ ಟಿಕ್ಟಾಕ್ ಮೇಲೂ ಜನರ ಮುನಿಸಿಕೊಂಡಿದ್ದು, ಅದನ್ನು ಅನ್ಇನ್ಸ್ಟಾಲ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದರ ಲಾಭ ಪಡೆದು ಸ್ಥಳೀಯ ಮನರಂಜನಾ ಆ್ಯಪ್ಗಳು ಜನಪ್ರಿಯಗೊಳ್ಳುತ್ತಿವೆ. ಹೀಗಾಗಿ ಬೆಂಗಳೂರು ಮೂಲದ ‘ಚಿಂಗಾರಿ’ ಆ್ಯಪ್ ಅನ್ನು ಕಳೆದ 72 ಗಂಟೆಗಳಲ್ಲಿ ಐದು ಲಕ್ಷಕ್ಕೂ ಅಧಿಕ ಮಂದಿ ಡೌನ್ಲೋಡ್ ಮಾಡಿದ್ದಾರೆ.
‘ದೇಶದ ಬಳಕೆದಾರರು ಚೀನಿ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ಗಳನ್ನು ಬಹಿಷ್ಕರಿಸಲು ಮುಂದಾಗಿರುವುದರಿಂದ ‘ಮೇಡ್ ಇನ್ ಇಂಡಿಯಾ’ ಅಪ್ಲಿಕೇಶನ್ಗಳು ಜನಪ್ರಿಯತೆ ಗಳಿಸುತ್ತಿವೆ’ ಎಂದು ಬೆಂಗಳೂರಿನಲ್ಲಿರುವ ಚಿಂಗಾರಿ ಆ್ಯಪ್ ಡೆವೆಲಪರ್ಗಳು ಹೇಳಿದ್ದಾರೆ.
‘ಚಿಂಗಾರಿ ಅಪ್ಲಿಕೇಶನ್ ಕೇವಲ 72 ಗಂಟೆಗಳಲ್ಲಿ ಸುಮಾರು 5,00,000 ಬಳಕೆದಾರರನ್ನು ಗಳಿಸಿದೆ ಎಂದು ಸಂಸ್ಥೆ ತಿಳಿಸಿದೆ.
‘ಚಿಂಗಾರಿಯ ಬೇಡಿಕೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಪ್ರಥಮ ಸ್ಥಾನದಲ್ಲಿದೆ. ಅಲ್ಲದೆ, ಟಿಕ್ಟಾಕ್ ಆ್ಯಪ್ನ ತದ್ರೂಪಾಗಿದ್ದ ‘ಮಿಟ್ರಾನ್’ ಅಪ್ಲಿಕೇಶನ್ ಅನ್ನು ಮೀರಿಸಿದೆ,’ ಎಂದೂ ಡೆವೆಲಪರ್ಗಳು ತಿಳಿಸಿದ್ದಾರೆ.
ಅನೇಕ ಭಾಷೆಗಳಲ್ಲಿ ಲಭ್ಯವಿರುವ ಚಿಂಗಾರಿ ಆ್ಯಪ್, ಬಳಕೆದಾರರಿಗೆ ವಿಡಿಯೊಗಳನ್ನು ಡೌನ್ಲೋಡ್ ಮಾಡಲು ಮತ್ತು ಅಪ್ಲೋಡ್ ಮಾಡಲು, ಸ್ನೇಹಿತರೊಂದಿಗೆ ಚಾಟ್ ಮಾಡಲು, ಜನರೊಂದಿಗೆ ಸಂವಹನ ನಡೆಸಲು, ವಿಷಯವನ್ನು ಹಂಚಿಕೊಳ್ಳಲು ಅವಕಾಶ ನೀಡಿದೆ.