ನಿಟ್ಟೆ: ಇಂದಿನ ನಮ್ಮ ಉತ್ತಮ ಬದುಕಿಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವೇ ಕಾರಣವೆಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇ ರೀತಿ ಪ್ರಸ್ತುತ ದಿನಗಳಲ್ಲಿ ಪ್ರತಿನಿತ್ಯದ ನೆಮ್ಮದಿಯ ಬದುಕಿಗೆ ಕಾರಣವಾಗಿರುವ ದೇಶದ ಗಡಿ ಕಾಯುವ ಯೋಧರ ತ್ಯಾಗಬಲಿದಾನವೂ ಸ್ಮರಣೀಯವಾದುದು. ಜಾಗತಿಕ ಮಟ್ಟದಲ್ಲಿ ಭಾರತವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ನಿಟ್ಟೆ ಕ್ಯಾಂಪಸ್ನ ಮೈಂಟೆನೆನ್ಸ್ ಎಂಡ್ ಡೆವಲೆಪ್ಮೆಂಟ್ ನ ನಿರ್ದೇಶಕ ಎ.ಯೋಗೀಶ್ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ಆಗಸ್ಟ್15 ರಂದು ನಿಟ್ಟೆ ಕ್ಯಾಂಪಸ್ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಿಟ್ಟೆ ಕಾಲೇಜ್ ಕ್ಯಾಂಪಸ್ ನಲ್ಲಿ 6 ಕೆ.ಎ.ಆರ್ ನೇವಲ್ ಎನ್.ಸಿ.ಸಿ ಘಟಕದಡಿಯಲ್ಲಿ, ಕಳೆದ ಒಂದು ವಾರದಿಂದ ನಡೆದ ಎನ್.ಸಿ.ಸಿ ತರಬೇತಿ ಶಿಬಿರದಲ್ಲಿ ಜಿಲ್ಲೆಯ 23 ಶಾಲೆಗಳ ಹಾಗೂ 8 ಕಾಲೇಜುಗಳ 400 ಎನ್.ಸಿ.ಸಿ ಕೆಡೆಟ್ ಗಳು ಭಾಗವಹಿಸಿದ್ದರು. ಈ ಶಿಬಿರದ ರೂವಾರಿಯಾಗಿರುವ 6 ಕೆ.ಎ.ಆರ್ ನೇವಲ್ ಘಟಕದ ಕಮಾಡಿಂಗ್ ಆಫೀಸರ್- ಕಮಾಂಡರ್ ಕಾರ್ತಿಕ್ ದಾಸ್ ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ತರಬೇತಿ ನಿರತ ಎನ್.ಸಿ.ಸಿ ಕೆಡೆಟ್ ಗಳಿಂದ ಆಕರ್ಷಕ ಪಥಸಂಚಲನ ಹಾಗೂ ಡಾ.ಎನ್.ಎಸ್.ಎ.ಎಂ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಶಿಕ್ಷಕವೃಂದ, ಶಿಕ್ಷಕೇತರ ವರ್ಗದವರು ಭಾಗವಹಿಸಿದ್ದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್ ಸ್ವಾಗತಿಸಿದರು. ನಿಟ್ಟ ಕ್ಯಾಂಪಸ್ ನ ರೆಸಿಡೆಂಟ್ ಇಂಜಿನಿಯರ್ ಡಾ. ಶ್ರೀನಾಥ್ ಶೆಟ್ಟಿ ವಂದಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಎನ್.ಸಿ.ಸಿ ಘಟಕದ ಉಸ್ತುವಾರಿ ಅಧಿಕಾರಿ ಡಾ.ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.