ವಿಜಯನಗರ ಜಿಲ್ಲೆ ರಚನೆ ಬೆನ್ನಲ್ಲೇ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆಂದ ಬಿಜೆಪಿ ಶಾಸಕ

ಬೆಂಗಳೂರು: ಬಳ್ಳಾರಿ ಜಿಲ್ಲೆಯಿಂದ ಹೊಸಪೇಟೆ ತಾಲ್ಲೂಕನ್ನು ಬೇರ್ಪಡಿಸಿ, ನೂತನ ವಿಜಯನಗರ ಜಿಲ್ಲೆಯನ್ನಾಗಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಇಂದು ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸದ್ಯ ಸಭೆಯಲ್ಲಿ ಅನೌಪಚಾರಿಕ ಒಪ್ಪಿಗೆ ಸಿಕ್ಕಿದ್ದು, ಮುಂದಿನ ಸಭೆಯಲ್ಲಿ ಅಧಿಕೃತ ಅನುಮೋದನೆ ದೊರಕಲಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಜಿಲ್ಲೆ ಘೋಷಣೆ ಬೆನ್ನಲ್ಲೇ ಆಕ್ರೋಶ:
ಬಳ್ಳಾರಿಯಿಂದ ಹೊಸಪೇಟೆ ಬೇರ್ಪಡಿಸಿ ಹೊಸ ಜಿಲ್ಲೆಯನ್ನಾಗಿ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದ ಬೆನ್ನಲೇ ಆಕ್ರೋಶ ಕೂಡ ವ್ಯಕ್ತವಾಗಿದೆ.

ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಸರ್ಕಾರದ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಿಂದ ಬೇರ್ಪಡಿಸಿ ಬೇರೊಂದು ಜಿಲ್ಲೆ ರಚನೆ ಮಾಡಿದ ಮಾತ್ರಕ್ಕೆ, ಆ ಜಿಲ್ಲೆ ಅಭಿವೃದ್ಧಿ ಆಗಲ್ಲ. ಉದಾಹರಣೆ ಯಾದಗಿರಿ, ಕೊಪ್ಪಳ ಜಿಲ್ಲೆಗಳು ಹಿಂದಿನ ಸ್ಥಿತಿಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

ಹೊಸ ಜಿಲ್ಲೆ ರಚನೆ ಆದ ಮಾತ್ರಕ್ಕೆ ಅಭಿವೃದ್ಧಿ ಮಾಡಬಹುದು ಎನ್ನುವುದು ಕೇವಲ ಭ್ರಮೆ. ಇದಕ್ಕೆ ಬಳ್ಳಾರಿಯ ಜನ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.