ಇಂಗ್ಲೆಂಡ್ 178ಕ್ಕೆ ಆಲೌಟ್: ಭಾರತಕ್ಕೆ 420 ರನ್ ಗುರಿ

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (61ಕ್ಕೆ 6 ವಿಕೆಟ್) ಮಾರಕ ದಾಳಿಗೆ ತತ್ತರಿಸಿದ್ದು, ಕೇವಲ 178 ರನ್‌ಗಳಿಗೆ ಆಲೌಟ್ ಆಗಿದೆ.

ಆದರೂ ಭಾರತದ ಗೆಲುವಿಗೆ 420 ರನ್‌ಗಳ ಬೃಹತ್ ಗುರಿಯನ್ನು ಇಂಗ್ಲೆಂಡ್ ಒಡ್ಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು 241 ರನ್‌ಗಳ ಭಾರಿ ಮುನ್ನಡೆ ಸಾಧಿಸಿತ್ತು.

ಭಾರತಕ್ಕೆ ಫಾಲೋಆನ್ ಹೇರದೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರ ಪಡೆಗೆ ಭಾರತೀಯ ಬೌಲರ್‌ಗಳು ತಿರುಗೇಟು ನೀಡಿದರು. ಅಲ್ಲದೆ 101 ರನ್ ಗಳಿಸುವಷ್ಟರಲ್ಲಿ ಐದು ಮಂದಿ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪೆರೇಡ್ ನಡೆಸಿದರು.

ಅಶ್ವಿನ್‌ಗೆ ತಕ್ಕ ಬೆಂಬಲ ನೀಡಿದ ಶಹಬಾಜ್ ನದೀಂ ಎರಡು ಮತ್ತು ಜಸ್‌ಪ್ರೀತ್ ಬೂಮ್ರಾ ಹಾಗೂ ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ನ್ನು ಪಡೆದರು.