ಉಡುಪಿ: ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಗಳ ಜೊತೆಗೆ ಪಕ್ಷ ಸಂಘಟನೆಯನ್ನು ಕಣ್ಣ ಮುಂದೆ ಇಟ್ಟುಕೊಂಡು ಜಿಲ್ಲೆಯಾದ್ಯಂತ ಬೂತ್ ಸಶಕ್ತೀಕರಣದ ಮೂಲಕ ಹೊಸ ಆಲೋಚನೆಗಳೊಂದಿಗೆ ವಿಸ್ತಾರವಾಗಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಕರೆ ನೀಡಿದರು.
ಅವರು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಮಾಸಿಕ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.
ಜನಪ್ರತಿನಿಧಿಗಳು ಮತ್ತು ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ, ಬೂತ್ ಸಹಿತ ಪಕ್ಷದ ವಿವಿಧ ಸ್ತರದ ಸಂಘಟನಾತ್ಮಕ ತಂಡಗಳ ನಡುವಿನ ಸಂಬಂಧವನ್ನು ಸದೃಢಗೊಳಿಸುವ ಜೊತೆಗೆ ಪ್ರತೀ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಗುರುತಿಸಿ ಸಕ್ರಿಯಗೊಳಿಸುವ ಪ್ರಕ್ರಿಯೆ ನಡೆಯಬೇಕು. ಪಾರಂಪರಿಕ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಅಗತ್ಯವಿದೆ. ಮುಂದಿನ ಎಲ್ಲಾ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿ ಜಿಲ್ಲೆಯಲ್ಲಿ ಬಿಜೆಪಿ ವಿಕ್ರಮ ವಿಜಯದ ದಾಖಲೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕು ಎಂದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ರಾಜ್ಯ ಬಿಜೆಪಿ ಸೂಚನೆಯಂತೆ ಬೂತ್ ಅಧ್ಯಕ್ಷರ ನಾಮಫಲಕ ಅಭಿಯಾನ ಮತ್ತು ಗ್ರಾಮ ಪಂಚಾಯತ್ ಮಟ್ಟದ ಸಮಾವೇಶವನ್ನು ನಿಗದಿತ ಸಮಯದ ಮಿತಿಯೊಳಗೆ ಆಯೋಜಿಸಬೇಕು. ಸರಕಾರದ ವಿವಿಧ ಯೋಜನೆಗಳನ್ನು ಜನತೆಗೆ ತಲುಪಿಸುವ ಜೊತೆಗೆ ಚುನಾವಣೆಯ ಹಿನ್ನೆಲೆಯಲ್ಲಿ ಸಂಘಟನೆಗೆ ವೇಗ ನೀಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಪಕ್ಷದ ನಿಗದಿತ ಕಾರ್ಯಕ್ರಮಗಳ ಅನುಷ್ಠಾನದ ಸಹಿತ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಜಿ.ಪಂ., ತಾ.ಪಂ. ಚುನಾವಣೆಗೆ ಸರ್ವ ಸನ್ನದ್ಧರಾಗಿ ಮಗದೊಮ್ಮೆ ಜಿಲ್ಲೆಯಲ್ಲಿ ಬಿಜೆಪಿ ವಿಜಯ ಪತಾಕೆಯನ್ನು ಬಾನೆತ್ತರಕ್ಕೇರಿಸಲು ಎಲ್ಲರ ಸಂಘಟಿತ ಪ್ರಯತ್ನ ಅಗತ್ಯ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.