ಉಡುಪಿ: ದೈನಂದಿನ ಕಾರ್ಯಗಳಲ್ಲಿ ತಂತ್ರಜ್ಞಾನದ ಬಳಕೆಯ ಜೊತೆಗೆ ಅವುಗಳ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡುವುದು ಅವಶ್ಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಉಡುಪಿ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸೈಬರ್ ಸೆಕ್ಯೂರಿಟಿ ಮತ್ತು ಇ- ಆಡಳಿತ ವಿಷಯಗಳ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಾಹಿತಿ ತಂತ್ರಜ್ಞಾನದ ಬಳಕೆ ದೈನಂದಿನ ಜೀವನದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೆಲವರು ಇದರ ದುರುಪಯೋಗ ಪಡಿಸಿಕೊಂಡು ದೇಶದ ಯಾವುದೋ ಮೂಲೆಯಲ್ಲಿ ಕುಳಿತು ಅಮಾಯಕರ ಬ್ಯಾಂಕ್ ಖಾತೆಗಳಿಗೆ ಖನ್ನಾ, ಇ-ಮೇಲ್ ಐ.ಡಿ.ಗಳ ಹ್ಯಾಕ್, ಜಾಲತಾಣಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇವುಗಳಿಗೆ ಕಡಿವಾಣ ಹಾಕಲು ಸೈಬರ್ ಸೆಕ್ಯೂರಿಟಿಗಳ ಮಾಹಿತಿ ಹೊಂದಿ ಸುರಕ್ಷತೆಗೆ ಆದ್ಯತೆ ನೀಡುವುದು ಒಳಿತು ಎಂದರು.
ಯಾವುದೇ ಓರ್ವ ಅಪರಿಚಿತ ವ್ಯಕ್ತಿಯ ಹೆಸರಿನಿಂದ ಮೇಲ್ ಅಥವಾ ಸಂದೇಶಗಳು ಬಂದರೆ ಅವುಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು, ತಪ್ಪಿದ್ದಲ್ಲಿ ಅವುಗಳ ತೆರೆಯುವಿಕೆಯಿಂದ ವೈರಸ್ ಹರಡಿ ದತ್ತಾಂಶಗಳು ಹಾಳಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ಹೆಚ್ಚುತ್ತಿರುವ ಸೈಬರ್ ಅಪರಾಧಿಗಳ ತಡೆಗೆ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸೈಬರ್ ಅಪರಾಧಿ ತಡೆ ತಾಣಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕುಗಳಿಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದರು.
ಎನ್.ಐ.ಟಿ.ಕೆ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಲ್ವಿನ್ ರೋಶನ್ ಪೈಸ್ ಮಾತನಾಡಿ, ವೆಬ್‌ಸೈಟ್‌ಗಳನ್ನು ರೂಪಿಸುವ ಸುರಕ್ಷತಾ ಕ್ರಮಗಳಿಗೂ ಹೆಚ್ಚಿನ ಗಮನ ಹರಿಸಬೇಕು. ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‌ಬುಕ್, ಇನ್ ಸ್ಟಗ್ರಾಮ್ ಗಳಲ್ಲಿ ಪಾಸ್‌ವರ್ಡ್ ಗಳನ್ನು ನಿರಂತರವಾಗಿ ಬದಲಾಯಿಸುತ್ತಿರುವುದು ಅತೀ ಅಗತ್ಯ ಎಂದರು.
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಂಗಳೂರು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ವೆಂಕಟೇಶ್ ಜಿ. ಮತ್ತಿತರರು ಉಪಸ್ಥಿತರಿದ್ದರು.