ತನ್ನ ಮೇಲೆ ಸುಖಾಸುಮ್ಮನೆ ಕೊರೋನಾ ಪಾಸಿಟಿವ್ ಎಂದು ಅಪ್ರಚಾರ ಮಾಡಿದಾಗ ಈ ವ್ಯಕ್ತಿ ನೋವಿನಿಂದ ಕಂಗಾಲಾಗುತ್ತಾರೆ. ತನಗ್ಯಾವ ಕೊರೋನಾವೂ ಇಲ್ಲ ಎಂದು ವೈದ್ಯಕೀಯ ದೃಢೀಕರಣ ವರದಿ ಬಗ್ಗೆ ಹೇಳಿದರೂ ಜನರು ಇವರನ್ನು ವಿಚಿತ್ರವಾಗಿ ನೋಡತೊಡಗಿದಾಗ ಈ ವ್ಯಕ್ತಿ ಕುಸಿದು ಹೋಗುತ್ತಾರೆ. ಅದೇ ನೋವಿನಲ್ಲಿ ಅವರೊಂದು ಪತ್ರ ಬರೆಯುತ್ತಾರೆ.ಈ ಪತ್ರದಲ್ಲಿ ಜನರ ಮನಃಸ್ಥಿತಿಯ ಬಗ್ಗೆ ವಿಷಾದ ವ್ಯಕ್ತವಾಗಿದೆ. ಈ ಪತ್ರವನ್ನು ನೀವೂ ಓದಿ. ಸುಮ್ಮಸುಮ್ಮನೆ ಕೊರೋನಾ ಹೆಸರು ಬಳಸಿ ಮುಗ್ದ ಮನಸ್ಸುಗಳ ಭವಿಷ್ಯವನ್ನು ಹಾಳುಗೆಡವದಿರೋಣ
ನಮ್ಮ ಸ್ಥಿತಿ ಯಾರಿಗೂ ಬಾರದಿರಲಿ:
ನಾನೊಬ್ಬ ಕಾರ್ಕಳದ ನಾಗರಿಕ, ನನ್ನ ಜೀವನದ ಅಸಹನೀಯ ಘಟನೆಯೊಂದನ್ನು ನೋವಿನಿಂದ ನಿಮ್ಮ ಮುಂದಿಡುತ್ತಿದ್ದೇನೆ. ಸಾಲಶೂಲ ಮಾಡಿ ಚಿಕ್ಕದಾದ ವ್ಯಾಪಾರವೊಂದನ್ನು ಕಾರ್ಕಳದಲ್ಲಿ ಆರಂಭಿಸಿದ್ದೆ, ಜೊತೆಗೆ ಪಿಗ್ಮಿ ಸಂಗ್ರಹಣೆಯನ್ನೂ ಮಾಡಿ ಹೇಗೋ ಜೀವನ ಸಾಗಿಸುತ್ತಿದ್ದೆ, ಮೊನ್ನೆ ಏಪ್ರಿಲ್ 22 ರಂದು ನನಗೆ ವ್ಯಾಪಾರಕ್ಕೆ ಸಂಬಂದಿಸಿ ಒಂದು ಲೋಡ್ ಸಿಮೆಂಟ್ ಬಂದಿತ್ತು, ಕಥೆ ಶುರು ಆಗುವುದೇ ಇಲ್ಲಿಂದ,ಸಿಮೆಂಟ್ ಇಳಿಸಿದ ಲಾರಿ ಮತ್ತೆ ಮಂಗಳೂರಿಗೆ ಹೋಗಿ ಅಲ್ಲಿಂದ ತಮಿಳುನಾಡಿಗೆ ಹೋಗಿತ್ತು ಮಾತ್ರವಲ್ಲದೆ ಅದೇ ಚಾಲಕ ಇನ್ನೊಂದು ಟ್ರಿಪ್ ಮಾಡಿದ ಬಗ್ಗೆಯೂ ತಿಳಿದು ಬಂದಿದೆ. ಮೇ 9 ರಂದು ಅದೇ ಲಾರಿಯ ಚಾಲಕನಿಗೆ ಕೊರೊನ ಸೋಂಕು ಧೃಢಪಟ್ಟಿತ್ತು,
ಅದೂ 18 ದಿನಗಳ ನಂತರ. ಈ ಬಗ್ಗೆ ತನಿಖೆ ನಡೆಸಿದ ಆರೊಗ್ಯ ಇಲಾಖೆ ಯವರು ಅವರ ನಿಯಮ ಪ್ರಕಾರ ಮೇ 10 ರಂದು ನನ್ನನ್ನು ಪತ್ನಿ ಮಗನೊಂದಿಗೆ ಬರ ಹೇಳಿ ಆರೋಗ್ಯದ ಬಗ್ಗೆ ವಿಚಾರಿಸಿ ಅದಾಗಲೇ 19 ದಿನಗಳು ಕಳೆದಿರುವುದರಿಂದ ಮತ್ತು ಚಾಲಕನೊಂದಿಗೆ ನನಗೆ ನೇರ ಸಂಪರ್ಕವಾಗದ ಕಾರಣ ಸೂಕ್ತ ಪರೀಕ್ಷೆ/ ಸಲಹೆಗಳನ್ನು ನೀಡಿ ಮನೆಗೆ ಕಳುಹಿಸಿದ್ದರು.ಆದರೆ ಮನೆಗೆ ಹಿಂತಿರುಗುವಾಗ ಪರಿಸ್ಥಿತಿಯೇ ಬದಲಾಗಿತ್ತು.
ಅದ್ಯಾರೋ ಕೆಟ್ಟ ಮನಸ್ಥಿತಿಯ,ಪ್ರಾಣಿಗಿಂತಲೂ ಕೀಳಾದ ಅಮಾನುಶರು ನಮ್ಮ ಬಗ್ಗೆ ಕಾರ್ಕಳದ ಮೂಲೆ ಮೂಲೆ ಗಳಲ್ಲಿ ನಮಗೆ ಕೊರೊನ+ve ಎಂದು ಅಪಪ್ರಚಾರ ನಡೆಸಿಯಾಗಿತ್ತು. ನಮ್ಮನ್ನು ಕಂಡ ಕಂಡಲ್ಲಿ ಜನರು ಕೊಳೆತು ನಾರುವ ಕುಷ್ಟ ರೋಗಿಯನ್ನು ನೋಡುವಂತೆ ವಿಚಿತ್ರವಾಗಿ ನೋಡಲು ಆರಂಭಿಸಿದರು,ಇದೆಲ್ಲಾ ಮೂಕ ವಿಸ್ಮಿತರಾಗಿ ನೊಡುವುದೊಂದೇ ನಮಗಿರುವ ದಾರಿಯಾಗಿತ್ತು.
ಯಾಕೆಂದರೆ ನಾವು ಹೇಳುವ ಯಾವುದೇ ಸ್ಪಷ್ಟೀಕರಣ ಕೇಳುವ ಮನಸ್ಥಿತಿಯಲ್ಲಿ ಅವರಿರಲಿಲ್ಲ.ನಾವು ಕೊರೊನ ಪೀಡಿತರಾಗಿದಲ್ಲಿ ನಮ್ಮನ್ನು ಮನೆಗೆ ಕಳುಹಿಸುತ್ತಿರಲಿಲ್ಲ ಎಂದು ಸ್ಪಷ್ಟವಾಗಿ ವಿವರಿಸಿದರೂ ಅದು ಗೊರ್ಕಲ್ಲ ಮೇಲೆ ನೀರು ಸುರಿದಂತೆ ಆಗಿತ್ತು, ಒಟ್ಟಿನಲ್ಲಿ ಜೀವಂತ ಶವದಂತೆ ನಮ್ಮ ಪರಿಸ್ತಿತಿ ಯಾಗಿತ್ತು.
ಅದಾಗಲೇ ಫೋನ್ ಕರೆಗಳ ಸುರಿಮಳೆ ಆರಂಭವಾಗಿತ್ತು.ಯವುದೋ ದೊಡ್ಡ ಅಪರಾಧಿಯಲ್ಲಿ ಮಾತನಾಡುವಂತೆ ನಮ್ಮಲ್ಲಿ ಮಾತನಾಡುತ್ತಿದ್ದರು,ಒಂದಿಬ್ಬರನ್ನು ಬಿಟ್ಟರೆ ನಮಗೆ ಧೈರ್ಯ/ಸಹಾಯ ಮಾಡುವವರು ಯಾರೂ ಇರಲಿಲ್ಲ, ಅದಾಗಲೇ ಯಾರೋ ಅರೆಬೆಂದ ಮನೋರೋಗಿಯೊಬ್ಬ ನಮ್ಮ ವ್ಯಾಪಾರ ಸಂಸ್ಥೆಯ ಹೆಸರನ್ನೇ ಸಾಮಾಜಿಕ ಜಾಲದಲ್ಲಿ ಹಾಕಿ ವಿಚಿತ್ರ ಸುಖ ಅನುಭವಿಸುತ್ತೀದ್ದ.ಅದಕ್ಕೆ ಪೂರಕವಾಗಿ ಟಿವಿ ಮಾದ್ಯಮದಲ್ಲಿ “ಕೊರೊನ ಆತಂಕದಲ್ಲಿ ಕಾರ್ಕಳ” ಎಂದು ಹಗ್ಗವನ್ನು ಹಾವಾಗಿಸುವ ಪ್ರಯತ್ನವೂ ನಡೆಯಿತು, ನಿಜವಾಗಿ ಸಮಾಜಕ್ಕೆ ಆತಂಕವಿರುವುದು ಇಂತಹವರಿಂದ ಹೊರತು ರೊಗಗಳಿಂದ ಅಲ್ಲ. ಯೋಚಿಸಿ ಬಂಧುಗಳೇ ಹೇಗಿದೆ ನಮ್ಮ ಸಮಾಜ?
ಸಹಾಯ ಹಸ್ತ ಚಾಚುವುದು ಬಿಡಿ ಮುಳುಗುವವನಿಗೆ ಕಲ್ಲು ಎತ್ತಿಹಾಕುವ ವಿಚಿತ್ರ ಪರಿಸರ, ನಮ್ಮ ಸಮಾಜದ ಈ ರೀತಿಯ ವರ್ತನೆಯಿಂದ ರಸ್ತೆಯಲ್ಲಿ ನಡೆಯುವುದೂ ನಮಗೆ ಕಷ್ಟವಾಗಿದೆ.ನಾವು ಮಾಡಿದ ತಪ್ಪಾದರೂ ಏನು? ಇದೀಗ ರಿಪೋರ್ಟ್ ನೆಗೆಟಿವ್ ಬಂದಿದೆ, ಪಾಸಿಟಿವ್ ಎಂದು ಅಪಪ್ರಚಾರ ಮಾಡಿದ ಅದೇ ಸುಖೀ ವರ್ಗ ಈಗ ಏನು ಮಾಡುತ್ತದೆ ಕಾದು ನೊಡಬೇಕು ವಿರೊಧಿಗಳಿಗೂ ಇಂತಹ ದಾರುಣ ಪರಿಸ್ಥಿತಿ ಬಾರದಿರಲಿ
-ಅನಂತ ಕೃಷ್ಣ ಕಾಮತ್ ಕಾರ್ಕಳ