ಬಾಲ್ಯದಲ್ಲೇ ಯಕ್ಷರಂಗದಲ್ಲಿ ಗೆಜ್ಜೆ ಕಟ್ಟಿದ್ರು ಕಾರ್ಕಳದ ಎಳ್ಳಾರೆ ಹುಡ್ಗ: ಈ ಬಾಲ ಪ್ರತಿಭೆಯ ಕತೆ ಕೇಳಿ

 ಯಕ್ಷಗಾನ  “ಯಕ್ಷಗಾನಂ ವಿಶ್ವಗಾನಂ”  ಎನ್ನುವಂತೆ ಯಕ್ಷಗಾನ ಕಲೆಯು ವಿಶ್ವದಲ್ಲಿ ಅತ್ಯಂತ  ಪ್ರಸಿದ್ದವಾಗಿದೆ. ಯಕ್ಷಗಾನದ ಉಭಯ ತಿಟ್ಟುಗಳಲ್ಲಿ ಹಲವಾರು  ಬಾಲ ಕಲಾವಿದರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.  ಇಂತಹ  ಕಲಾವಿದರಲ್ಲಿ ಅನುಜಿತ್ ನಾಯಕ್ ಎಳ್ಳಾರೆ ಕೂಡ ಒಬ್ಬರು. ಬಾಲ ಕಲಾವಿದನಾಗಿ ಯಕ್ಷಗಾನ ಕ್ಷೇತ್ರದಲ್ಲಿ ಈಗಾಗಲೇ ಮಿಂಚುತ್ತಿರುವ ಅನುಜಿತ್  ಕನಸು ಕಂಗಳ ಹುಡುಗ.
  ಕನಸುಕಂಗಳ ಹುಡುಗ:
 ಕಾರ್ಕಳ ತಾಲೂಕಿನ ಎಳ್ಳಾರೆಯ ಶ್ರೀ ನಿವಾಸ್ ನಾಯಕ್, ಜ್ಯೋತಿ ನಾಯಕ್ ದಂಪತಿಗಳ  ಪುತ್ರ  ಅನುಜಿತ್, ತನ್ನ ಅಣ್ಣ  ಮುಂಬೈ ಯಕ್ಷರಂಗದ  ಶ್ರೇಷ್ಠ ಕಲಾವಿದ ಪೂರ್ಣಾನಂದ ನಾಯಕ್ ಎಳ್ಳಾರೆ ಯಕ್ಷಗಾನದಲ್ಲಿದ್ದದನ್ನು ಕಂಡು ತಾನು ಯಕ್ಷ ಕಲಾವಿದನಾಗಬೇಕೆಂಬ  ಒಲವನ್ನು ತೋರಿದರು.  ಇದನ್ನು ಮನಗಂಡ ಪೋಷಕರು ಇವರನ್ನು ಯಕ್ಷಲೋಕ ಹೆಬ್ಬೇರಿ (ಹೆಬ್ರಿ )ಯ ಯಕ್ಷಗಾನ ತರಬೇತಿಗೆ ಸೇರಿಸಿದರು. ಅಲ್ಲಿ ಖ್ಯಾತ ಗುರು ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿಯಲ್ಲಿ ತಾಳ, ಹೆಜ್ಜೆಗಾರಿಕೆಯನ್ನು ಕಲಿತರು ಮತ್ತು ದೊಡ್ಡಪ್ಪ ಯಕ್ಷಗುರು ಶಂಕರ ನಾಯಕ್ ಎಳ್ಳಾರೆಯವರು ಇವರನ್ನು  ಉತ್ತಮ ಕಲಾವಿದರನ್ನಾಗಿ ರೂಪಿಸಿದರು.
 ಚಂದ ಚಂದದ ಪಾತ್ರ :
ಉತ್ತಮವಾಗಿ ಯಕ್ಷಗಾನವನ್ನು  ಕಲಿತಿರುವ ಅನುಜಿತ್, ಯಕ್ಷಗಾನ ಕಲೆಯ ಅದ್ಬುತ ಪಾತ್ರ ವಾದ ಸುಧನ್ವಾರ್ಜನದ ಸುದನ್ವ, ಚಕ್ರವ್ಯೂಹದ ಅಭಿಮನ್ಯುವಿನ ಪಾತ್ರ ಮಾಡಿ ಕಲಾಭಿಮಾನಿಗಳ ಮನವನ್ನು ಗೆದ್ದಿದ್ದಾರೆ. ಇವರ ಅದ್ಬುತ ನಾಟ್ಯ ಶೈಲಿಯನ್ನು  ಗಮನಿಸಿದ ಖ್ಯಾತ ಭಾಗವತ  ದಿ. ರಾಘವೇಂದ್ರ ನಾಯ್ಕ ಕರಂಬಳ್ಳಿ ಹಾಗೂ ಬಡಗುತಿಟ್ಟಿನ ಖ್ಯಾತ ಯಕ್ಷ ಕಲಾವಿದ  ರಘುನಾಥ್  ನಾಯಕ್ ಕಾರವರ, ಇವರನ್ನು ಪ್ರಶಂಶಿಸಿದ್ದಾರೆ.
 
ಸ್ತ್ರೀ ಪಾತ್ರದಲ್ಲೂ ಸೈ:
ಯಕ್ಷ ರಂಗದಲ್ಲಿ ಕೇವಲ ಪುಂಡು ವೇಷಧಾರಿಯಾಗಿ ಮಾತ್ರವಲ್ಲದೆ ಸ್ತ್ರೀ ವೇಷವನ್ನು  ಮಾಡಿದ್ದಾರೆ.ಇವರು ಬೆಂಗಳೂರಿನಲ್ಲಿ ಮಾಡಿದ ಬಲರಾಮ ಪಾತ್ರವು ಇವರ ಶ್ರೇಷ್ಠ ಪಾತ್ರಗಳಲ್ಲಿ ಒಂದು.  ಯಕ್ಷಗಾನದ ಪ್ರಮುಖ ವಾದನವಾದ  ಚೆಂಡೆ ಹಾಗೂ ಮೃದಂಗವನ್ನು ಗಣೇಶ್ ಶೆಣೈ ಶಿವಪುರ ಇವರಲ್ಲಿ  ಕಲಿತು ನರಸಿಂಗೆ ಹಾಗೂ ಮುಂಬೈಯಲ್ಲಿ ಒಂದು ಗಂಟೆಯ ಕಾರ್ಯಕ್ರಮವನ್ನು ನೀಡಿ ಕಲಾ ಪ್ರೌಡಿಮೆಯನ್ನು ಹೆಚ್ಚಿಸಿಕೊಂಡಿರುವ ಈ ಹುಡುಗನ  ಯಕ್ಷಗಾನ ಕಲಾ ಆಸಕ್ತಿಯನ್ನು  ಮೆಚ್ಚಿ ಇವರಿಗೆ ಯಕ್ಷವೈಭವ ಮಕ್ಕಳ ಮೇಳ ಮುಂಬಯಿಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ
 ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಗಿದೆ. 
 
 ಯಕ್ಷಗಾನ ಕ್ಷೇತ್ರ  ಮಾತ್ರವಲ್ಲದೆ ಶ್ರೀ  ಲಕ್ಷ್ಮೀಜನಾರ್ಧನ  ಭಜನಾ ಮಂಡಳಿಯ ಉತ್ತಮ ಭಜನಾಕಾರನಾಗಿ ಬಹುಮುಖ ವ್ಯಕ್ತಿತ್ವವನ್ನು  ಹೊಂದಿರುವ ಇವರು ಕಾಳಿಂಗ ನಾವುಡ ಪ್ರಶಸ್ತಿ ವಿಜೇತ ಶ್ರೀ ವೆಂಕಟ್ರಯ ನಾಯಕ್ ಎಳ್ಳಾರೆಯವರ ಮೊಮ್ಮಗನು ಹೌದು. ಪ್ರಸ್ತುತ
 ಅನುಜಿತ್ ಹೆಬ್ರಿಯ ಅಮೃತ ಭಾರತಿ ವಿದ್ಯಾಲಯದಲ್ಲಿ 9ನೇ ತರಗತಿ ಶಿಕ್ಷಣವನ್ನು ಪಡೆಯುತ್ತಿದ್ದು ಅಲ್ಲಿ ತಬಲವನ್ನೂ ಕಲಿಯುತ್ತಿದ್ದಾರೆ. ಬಹುಮುಖ ಪ್ರತಿಭೆಯುಳ್ಳ ಅನುಜಿತ್ ನಾಯಕ್ ಎಳ್ಳಾರೆಯವರ ಕಲಾ ಜೀವನಕ್ಕೆ ಹಾಗೂ ಶೈಕ್ಷಣಿಕ ಜೀವನಕ್ಕೆ ನಮ್ಮದ್ದೊಂದು ಹಾರೈಕೆ.
 
ನುಡಿ-ಬರಹ: -ದೀಪಕ್ ಕಾಮತ್ ,ಎಳ್ಳಾರೆ 
ಚಿತ್ರ:ರಾಮ್ ಅಜೆಕಾರ್