ಬೆಂಗಳೂರು: ರಾಜ್ಯದ ಜನತೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಉಚಿತ ವಿದ್ಯುತ್ ನಿಂದ ಆಗುವ ನಷ್ಟವನ್ನು ಸರಿದೂಗಿಸುವ ಸಲುವಾಗಿ ವಿದ್ಯುತ್ ದರವನ್ನು ಹೆಚ್ಚಿಸಿದೆ ಎನ್ನಲಾಗಿದ್ದು, ಇದರ ವಿರುದ್ದ ವಿರೋಧ ಪಕ್ಷ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ನಾಗರಿಕರು ತಮ್ಮ ವಿದ್ಯುತ್ ಬಿಲ್ಗಳನ್ನು ಪಾವತಿಸುವಾಗ 200 ಯೂನಿಟ್ಗಳಿಗಿಂತ ಹೆಚ್ಚಿನ ಸ್ಲ್ಯಾಬ್ ಹೊಂದಿದವರಾಗಿದ್ದರೆ ಈ ತಿಂಗಳು ಪ್ರತಿ ಯೂನಿಟ್ಗೆ 2.89 ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚದ ಹೊಂದಾಣಿಕೆ ಮತ್ತು ಏಪ್ರಿಲ್ ತಿಂಗಳಿನಿಂದ ಬಾಕಿಯನ್ನು ಈ ಹೆಚ್ಚುವರಿ ವೆಚ್ಚವು ಒಳಗೊಂಡಿದೆ.
ಇನ್ನುಳಿದಂತೆ ವಿದ್ಯುತ್ ದರದಲ್ಲಿ ಬದಲಾವಣೆಗಳಾಗಿದ್ದು ಬೆಸ್ಕಾಂ(ಬೆಂಗಳೂರು) ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ 30 ರವರೆಗೆ ಪ್ರತಿ ಯೂನಿಟ್ಗೆ 51 ಪೈಸೆ ಹೆಚ್ಚುವರಿ ಪಾವತಿಸಬೇಕು. ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ ವಿದ್ಯುತ್ಗೆ 50 ಪೈಸೆ ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಇಂಧನ ಹೊಂದಾಣಿಕೆ ಶುಲ್ಕ ವಾಪಸ್ ಪಡೆಯಲು ಈ ಬೆಲೆ ಪರಿಷ್ಕರಣೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಮೆಸ್ಕಾಂ(ಮಂಗಳೂರು) ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ 30 ರವರೆಗೆ ಪ್ರತಿ ಯೂನಿಟ್ಗೆ 47 ಪೈಸೆ ಮತ್ತು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ 46 ಪೈಸೆ ಪಾವತಿಸಬೇಕಾಗಿದೆ.
ಸೆಸ್ಕಾಂ (ಮೈಸೂರು) ಗ್ರಾಹಕರು ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ಗೆ 41 ಪೈಸೆ ಹೆಚ್ಚು ಪಾವತಿಸಬೇಕು ಮತ್ತು ಹೆಸ್ಕಾಂ (ಹುಬ್ಬಳ್ಳಿ-ಧಾರವಾಡ) ಗ್ರಾಹಕರು ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ಗೆ 50 ಪೈಸೆ ಹೆಚ್ಚು ಪಾವತಿಸಬೇಕಾಗಿದೆ.
ಜೆಸ್ಕಾಂ (ಕಲಬುರಗಿ) ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ 30 ರವರೆಗೆ ಪ್ರತಿ ಯೂನಿಟ್ಗೆ 34 ಪೈಸೆ ಮತ್ತು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ಗೆ 33 ಪೈಸೆ ಹೆಚ್ಚುವರಿ ಪಾವತಿಸಬೇಕಾಗಿದೆ.