ಅಂಚೆ ಕಚೇರಿಗಳಲ್ಲಿ ವಿದ್ಯುತ್, ಗ್ಯಾಸ್, ನೀರಿನ ಬಿಲ್ ಪಾವತಿ ಸೌಲಭ್ಯ

ಬೆಂಗಳೂರು: ವಿದ್ಯುತ್, ಗ್ಯಾಸ್, ನೀರಿನ ಬಿಲ್ ಗಳನ್ನು ಕಟ್ಟಲು ಅಲೆದಾಡುವ ಜನರಿಗೆ ಅಂಚೆ ಇಲಾಖೆ ಸಿಹಿಸುದ್ದಿ ನೀಡಿದೆ.

ಹೌದು, ರಾಜ್ಯದ 800ಕ್ಕೂ ಹೆಚ್ಚು ಅಂಚೆ ಕಚೇರಿಗಳಲ್ಲಿ ಇನ್ನು ಮುಂದೆ ನಾಗರಿಕರು ವಿದ್ಯುತ್, ಗ್ಯಾಸ್ ಮತ್ತು ನೀರಿನ ಬಿಲ್ ಪಾವತಿಸಬಹುದು. ಹಾಗೆ ಜೀವ ವಿಮೆ, ಸಾಮಾನ್ಯ ವಿಮೆ ಪಾಲಿಸಿಗಳು, ಇಎಂಐಗಳನ್ನು ಸಹ ಪಾವತಿಸಬಹುದು ಹಾಗೂ ಸಾಲಗಳಿಗೆ ಆನ್ ಲೈನ್ ಅರ್ಜಿಯನ್ನು ಸಹ ಅಂಚೆ ಕಚೇರಿ ಮೂಲಕ ಭರ್ತಿ ಮಾಡಬಹುದಾಗಿದೆ.

3 ತಿಂಗಳ ಪ್ರಾಯೋಗಿಕ ಸೇವೆ ನಂತರ ಅಂಚೆ ಇಲಾಖೆ, ನಮ್ಮ ರಾಜ್ಯದ 851 ಸೇರಿದಂತೆ ದೇಶಾದ್ಯಂತ 10 ಸಾವಿರಕ್ಕೂ ಅಧಿಕ ಅಂಚೆ ಕಚೇರಿಗಳಲ್ಲಿ ಜನ ಸೇವ ಕೇಂದ್ರಗಳನ್ನು ಆರಂಭಿಸಿದೆ. ಸಾಮಾನ್ಯ ಸೇವೆಗಳ ಕೇಂದ್ರದ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಭಾರತೀಯ ಅಂಚೆ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದ ವಿಶೇಷ ಸೇವಾ ವಾಹನವನ್ನು ಕೇಂದ್ರಗಳಲ್ಲಿ ಸ್ಥಾಪಿಸಿದೆ.

ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್, ರಾಜ್ಯದಲ್ಲಿ ಶೇಕಡಾ 50ರಷ್ಟು ಅಂಚೆ ಕಚೇರಿಗಳಲ್ಲಿ ದನ ಸೇವೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 345 ಕೇಂದ್ರಗಳು ಉತ್ತರ ಕರ್ನಾಟಕದಲ್ಲಿ, 386 ಕೇಂದ್ರಗಳು ದಕ್ಷಿಣ ಕರ್ನಾಟಕದಲ್ಲಿ ಹಾಗೂ 120 ಕೇಂದ್ರಗಳು ಬೆಂಗಳೂರು ವಲಯಗಳಲ್ಲಿವೆ. ಸರ್ಕಾರದಿಂದ ನಾಗರಿಕ ಸೇವೆಗಳು(G2C)ಸಹ ಅಂಚೆ ಕಚೇರಿಗಳಲ್ಲಿ ಜನರಿಗೆ ಒದಗಿಸಲಾಗುತ್ತಿದ್ದು, ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ರಾಷ್ಟ್ರೀಯ ಪಿಂಚಣಿ ಯೋಜನೆ, ಪ್ಯಾನ್ ಕಾರ್ಡು, ಇ-ಸ್ಟಾಂಪ್ ಸೇವೆಗಳು ಮತ್ತು ಜೀವನ್ ಪ್ರಮಾಣ್ ಪತ್ರ(ಡಿಜಿಟಲ್ ಲೈಫ್ ಸರ್ಟಿಫಿಕೇಟ್)ಗಳು ಆಪ್ ಮೂಲಕ ಸಿಗುವಂತೆ ಮಾಡಲಾಗುತ್ತದೆ.

ರಾಜ್ಯ ಸರ್ಕಾರದ ಜೊತೆಗೆ ಒಡಬಂಡಿಕೆ ಮಾಡಿಕೊಂಡು ಕರ್ನಾಟಕದ ಬೀದರ್, ಹುಬ್ಬಳ್ಳಿ, ಚನ್ನಪಟ್ಟಣ, ಮೈಸೂರು ಹಾಗೂ ಶಿವಮೊಗ್ಗಗಳಲ್ಲಿ ಸೇವೆಗಳನ್ನು ಆರಂಭಿಸಲಾಗಿದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದರಿಂದ ರೈತರಿಗೆ ತಮ್ಮ ಬೆಳೆಗಳಿಗೆ ನಿಖರವಾದ ಬೆಲೆ ಸಿಗುತ್ತದೆ ಎಂದು ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ ತಿಳಿಸಿದ್ದಾರೆ.