ಧರ್ಮಸ್ಥಳ, ಸುಬ್ರಮಣ್ಯ, ಮಣಿಪಾಲದಲ್ಲಿ ರೋಡಿಗಿಳಿಯಲಿರುವ ಎಲೆಕ್ಟ್ರಿಕ್ ಬಸ್!

ಮಂಗಳೂರು:ಕರಾವಳಿಯ  ಜನತೆಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಕರಾವಳಿಯಲ್ಲಿ ಎಲೆಕ್ಟ್ರಿಕ್ ಬಸ್ಗಳ ಕಾರ್ಯಾಚರಣೆಗೆ ಕೆಎಸ್ಸಾರ್ಟಿಸಿ  ತೀರ್ಮಾನ ಕೈಗೊಂಡಿದ್ದು, 6 ತಿಂಗಳೊಳಗೆ ಸುಮಾರು 90 ಎಸಿ ಮತ್ತು ನಾನ್ ಎಸಿ  ಎಲೆಕ್ಟ್ರಿಕ್ ಬಸ್ಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರೋಡಿಗೆ ಇಳಿಯಲಿವೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಎರಡೂ ಡಿಪೋಗಳಿಂದ ಬಸ್ಗಳಿಗೆ ಬೇಡಿಕೆ ಇದ್ದರೂ ಕೂಡ ನಿಗಮದಲ್ಲಿ ಬಸ್ಗಳ ಕೊರತೆಯಿದ್ದು, ಎಲೆಕ್ಟ್ರಿಕ್ ಬಸ್ಗಳು(Electric Bus)ಈ ಸಮಸ್ಯೆಗೆ ಪರಿಹಾರ ನೀಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಕೆಲವು ಎಲೆಕ್ಟ್ರಿಕ್ ಬಸ್ಗಳು ಕೆಎಸ್ಸಾರ್ಟಿಸಿಗೆ ಬಂದಿದ್ದರು ಕೂಡ ಮಂಗಳೂರು ಮತ್ತು ಪುತ್ತೂರು ವಿಭಾಗಕ್ಕೆ ಬಂದಿಲ್ಲ ಎನ್ನಲಾಗಿದೆ. ಎರಡನೇ ಹಂತದಲ್ಲಿ ಈ ವಿಭಾಗಕ್ಕೆ ಒದಗಿಸುವ ಯೋಜನೆ ರೂಪಿಸಲಾಗಿದೆ. ಬಸ್ಸಿಗೆ ಒಂದು ಬಾರಿ ಚಾರ್ಜ್ ಮಾಡಿದ್ದಲ್ಲಿ ಸುಮಾರು 250 ಕಿ.ಮೀ. ಸಂಚಾರ ನಡೆಸುತ್ತವೆ ಎನ್ನಲಾಗಿದೆ. ಮಂಗಳೂರಿನ ಕುಂಟಿಕಾನದಲ್ಲಿರುವ ಮೂರನೇ ಡಿಪೋದಲ್ಲಿ ಮತ್ತು ಧರ್ಮಸ್ಥಳ ಡಿಪೋದಲ್ಲಿ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ ಮಾಡಲಾಗಿದೆ.

ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯು ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗಿಳಿಸುವ ಮುನ್ನ ಯಾವ ರೂಟ್ಗಳಲ್ಲಿ ಓಡಾಟ ನಡೆಸಲಿವೆ ಎಂದು ಮಾಹಿತಿ ಒದಗಿಸುವಂತೆ ಮಂಗಳೂರು ಮತ್ತು ಪುತ್ತೂರು(Puttur) ಕೆಎಸ್ಸಾರ್ಟಿಸಿ ವಿಭಾಗಕ್ಕೆ ಸೂಚಿಸಿದೆ. ಸ್ಟೇಟ್ಬ್ಯಾಂಕ್ನಿಂದ ಉಡುಪಿ, ಮಣಿಪಾಲಕ್ಕೆ 20 ಬಸ್, ಮಂಗಳೂರಿನಿಂದ ಧರ್ಮಸ್ಥಳಕ್ಕೆ 10, ಕಾಸರಗೋಡು ಅಥವಾ ಇತರ ರೂಟ್ಗಳಲ್ಲಿ 10 ಬಸ್ಗಳನ್ನು ಕಾರ್ಯಾಚರಣೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಇನ್ನುಳಿದ ಬಸ್ಗಳನ್ನು ಪುತ್ತೂರು ವಿಭಾಗದಿಂದ ಧರ್ಮಸ್ಥಳ, ಮಂಗಳೂರು, ಸುಬ್ರಹ್ಮಣ್ಯ ಮಾರ್ಗಗಳಲ್ಲಿ ಓಡಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಕೆಲವೇ ತಿಂಗಳಿನಲ್ಲಿ ಹೊಸದಾಗಿ 550 ಕರ್ನಾಟಕ ಸಾರಿಗೆ ಬಸ್ಗಳು ಬರಲಿದ್ದು, ಮಂಗಳೂರು ವಿಭಾಗಕ್ಕೂ 30ರಿಂದ 40 ಹಂಚಿಕೆಯಾಗುವ ನಿರೀಕ್ಷೆ ದಟ್ಟವಾಗಿದೆ. ಹೀಗಾಗಿ, ಸುಮಾರು 16 ಶೆಡ್ನೂಲ್ಗಳನ್ನು ಹೆಚ್ಚುವರಿ ಕಾರ್ಯಾಚರಿಸಲು ಸಾಧ್ಯವಿದೆ ಎನ್ನಲಾಗಿದೆ. ಈಗಾಗಲೇ ಕೆಲವೊಂದು ಬಸ್ಗಳು ಸ್ಕ್ರ್ಯಾಪ್ ಆಗಿದ್ದು, ಇವುಗಳಿಗೆ ಬದಲಾಗಿ ಈ ಬಸ್ಗಳನ್ನು ಬಳಕೆ ಮಾಡುವ ಸಂಭವ ಕೂಡ ಇದೆ. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಸದ್ಯ 565 ವಿವಿಧ ಮಾದರಿಯ ಬಸ್ಗಳಿದ್ದು, 505 ಶೆಡ್ನೂಲ್ಗಳಲ್ಲಿ ಸಂಚರಿಸುತ್ತಿದ್ದು, ಪ್ರತಿದಿನ ಸುಮಾರು 1.10 ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದಾರೆ.ಮಂಗಳೂರಿಗೆ  ಶೀಘ್ರದಲ್ಲೇ ಎಲೆಕ್ಟ್ರಿಕ್ ಬಸ್ಗಳು ಆಗಮಿಸುವ ಸಾಧ್ಯತೆಯಿದ್ದು, ಯಾವೆಲ್ಲ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್ ಕಾರ್ಯಾಚರಿಸಬಹುದು ಎಂಬ ಸಾಧ್ಯತಾ ವರದಿಯನ್ನು ಕೇಂದ್ರ ಕಚೇರಿಗೆ ರವಾನೆ ಮಾಡುವ ಕುರಿತು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿಯವರು ಮಾಹಿತಿ ನೀಡಿದ್ದಾರೆ.