ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ:  ಶೋಭಾಗೆ ಒಲಿದ ಅದೃಷ್ಟ: ಹೆಗ್ಡೆ ಸ್ಪರ್ಧೆಯಿಂದ ಔಟ್

ಉಡುಪಿ: ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ಕೊನೆಗೂ ಬಿಜೆಪಿ ಅಭ್ಯರ್ಥಿ ಘೋಷಣೆ ಆಗಿದ್ದು, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನೇ ಎರಡನೇ ಅವಧಿಗೆ ಕಣಕ್ಕಿಳಿಲಿಸಿದೆ.

ಪರ ವಿರೋಧದ ನಡುವೆಯೂ ಬಿಜೆಪಿ ವರಿಷ್ಠರು ಮತ್ತೊಮ್ಮೆ ಶೋಭಾ ಅವರನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿದ್ದಾರೆ. ವರಿಷ್ಠರ ಈ ನಿರ್ಧಾರದಿಂದ ಪ್ರಬಲ ಆಕಾಂಕ್ಷಿಗಳಾಗಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹಾಗೂ ಬಿಜೆಪಿ‌ ಮುಖಂಡ ಯಶ್ ಪಾಲ್ ಸುವರ್ಣ ಅವರಿಗೆ ಹಿನ್ನಡೆಯಾಗಿದೆ. ಹೈಕಮಾಂಡ್ ಗಮನಸೆಳೆದು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಶೋಭಾ ಯಶಸ್ವಿಯಾಗಿದ್ದಾರೆ.
ಕಳೆದ ಬಾರಿ ಶೋಭಾ ಅವರು ಅಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಯಪ್ರಕಾಶ್ ಹೆಗ್ಡೆ ವಿರುದ್ಧ ಭಾರೀ ಅಂತರದ ಗೆಲುವು ದಾಖಲಿಸಿದ್ದರು. ಮೋದಿ ಹಾಗೂ ಹಿಂದುತ್ವದ ಅಲೆಯಲ್ಲಿ ಗೆದ್ದು ಬಂದಿದ್ದ ಶೋಭಾ ಅವರಿಗೆ ಈ ಬಾರಿ ಗೆಲುವು ಅಷ್ಟು ಸುಲಭ ಇಲ್ಲ ಎನ್ನಲಾಗುತ್ತಿದೆ. ಗೆದ್ದ ಬಳಿಕ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಕ್ಷೇತ್ರಕ್ಕೆ ಸರಿಯಾಗಿ ಭೇಟಿ ನೀಡುತ್ತಿರಲಿಲ್ಲ ಎಂಬ ಆರೋಪವೂ ಅವರ ಮೇಲಿದೆ. ಅಲ್ಲದೆ ಶೋಭಾ ಸ್ಪರ್ಧೆಗೆ ಸ್ವಪಕ್ಷದಿಂದಲೇ ಭಾರಿ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಈ ಎಲ್ಲ ಸವಾಲುಗಳನ್ನು ಎದುರಿಸಿಕೊಂಡು ಗೆದ್ದು ಬರುತ್ತಾರ ಎಂದು ಕಾದುನೋಡಬೇಕಾಗಿದೆ.