ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ : ಬೆಂಗಳೂರು ನಮ್ಮ ಮೆಟ್ರೋಗೆ ಹೊಸ ಎಂಡಿ
ರಾಜ್ಯದಲ್ಲಿ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : ಎಂಟು ಐಎಎಸ್, ಒಬ್ಬರು ಕೆಎಎಸ್ ಅಧಿಕಾರಿಗಳ ಟ್ರಾನ್ಸಫರ್
ನಮ್ಮ ಮೆಟ್ರೋಗೆ ಹೊಸ ಮ್ಯಾನೇಜಿಂಗ್ ಡೈರೆಕ್ಟರ್ : ಪಿಸಿ ಜಾಫರ್ ಹೆಗಲಿಗೆ ಹೊಸ ಜವಾಬ್ದಾರಿ ನೀಡಿದ ರಾಜ್ಯ ಸರ್ಕಾರ
ಬೆಂಗಳೂರು : ಕರ್ನಾಟಕ ಸರ್ಕಾರ ಬುಧವಾರ ಮತ್ತು ಗುರುವಾರ (ಆಗಸ್ಟ್ 6) ಎಂಟು ಐಎಎಸ್ ಶ್ರೇಣಿಯ ಅಧಿಕಾರಿಗಳನ್ನು ವಿವಿಧ ಇಲಾಖೆಗೆ ವರ್ಗಾವಣೆಯನ್ನು ಮಾಡಿ ಆದೇಶ ಹೊರಡಿಸಿದೆ. ಈ ಪೈಕಿ, ಡಾ.ಪಿಸಿ ಜಾಫರ್ ಅವರನ್ನು ಬಿಎಂಆರ್‌ಸಿಎಲ್ ಗೆ ಟ್ರಾನ್ಸಫರ್ ಮಾಡಲಾಗಿದೆ. ಎಂಡಿಯಾಗಿ ನಿಯುಕ್ತಿಗೊಂಡಿರುವ ಜಾಫರ್ ಅವರ ಮೇಲೆ, ನಮ್ಮ ಮೆಟ್ರೋ ಪಿಂಕ್ ಲೇನ್, ಆರಂಭಿಸುವ ಮಹತ್ವದ ಜವಾಬ್ದಾರಿಯಿದೆ. ಎಂಟು ಐಎಎಸ್ ಅಧಿಕಾರಿಗಳ ವರ್ಗಾವಣೆಯಲ್ಲದೇ, ಒಬ್ಬರು ಕೆಎಎಸ್ ಅಧಿಕಾರಿಯನ್ನೂ ಟ್ರಾನ್ಸಫರ್ ಮಾಡಲಾಗಿದೆ. ಡಾ.ಸ್ನೇಹಾ ಸಿವಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ, ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆಗೆ ನಿರ್ದೇಶಕಿಯಾಗಿ ವರ್ಗಾವಣೆ ಮಾಡಲಾಗಿದೆ. ಇವರು, ಅದೇ ಇಲಾಖೆಯಲ್ಲಿನ ಖಾಲಿಯಿದ್ದ ನಿರ್ದೇಶಕ ಪೋಸ್ಟಿಗೆ ವರ್ಗಾವಣೆಯನ್ನು ಮಾಡಲಾಗಿದೆ. ವರ್ಗಾವಣೆಯ ಆದೇಶವನ್ನು ಸರ್ಕಾರ, ಆಗಸ್ಟ್ ಏಳರಂದು ಹೊರಡಿಸಿದೆ.
ಯಾರನ್ನು ಎಲ್ಲಿಗೆ ಎಲ್ಲಿಂದ ವರ್ಗಾವಣೆ ಮಾಡಲಾಗಿದೆ, ಇಲ್ಲಿದೆ ಲಿಸ್ಟ್ :
1. 2003ರ ಬ್ಯಾಚಿನ ಡಾ. ಜಾಫರ್ ಪಿಸಿ ಅವರನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್, ಎಂಡಿಯಾಗಿ ವರ್ಗಾವಣೆ ಮಾಡಿ, ಆಗಸ್ಟ್ ಐದರಂದು ಸರ್ಕಾರ ಆದೇಶ ಹೊರಡಿಸಿದೆ. ಇವರು, ಹಣಕಾಸು ಇಲಾಖೆಯ ಬಜೆಟ್ ಮತ್ತು ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. 2. ಡಾ. ರಾಜು ಎಂ.ಟಿ ಅವರನ್ನು, ಹಣಕಾಸು ಇಲಾಖೆಯ ಬಜೆಟ್ ಮತ್ತು ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇವರು, 2005ರ ಬ್ಯಾಚಿನ ಅಧಿಕಾರಿಯಾಗಿದ್ದಾರೆ. ಜಾಫರ್ ಬದಲಿಗೆ ಇವರನ್ನು ನೇಮಿಸಲಾಗಿದೆ. ಆಗಸ್ಟ್ ಐದರಂದು ಈ ಆದೇಶ ಹೊರಡಿಸಲಾಗಿದೆ.
3. ಸರ್ಕಾರ, ಆಗಸ್ಟ್ ಐದರಂದು ಹೊರಡಿಸಲಾದ ಆದೇಶದ ಪ್ರಕಾರ, THM ಕುಮಾರ್ ಅವರನ್ನು, ಕರ್ನಾಟಕ ಸರ್ಕಾರ ವಸತಿ ಇಲಾಖೆಯ (Housing Department) ಕಾರ್ಯದರ್ಶಿಯನ್ನಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಿಸಲಾಗಿದೆ. ಈ ಸ್ಥಾನದಲ್ಲಿ ಮೋಹನ್ ರಾಜ್ ಕೆಪಿಯವರಿದ್ದರು. ಇವರು, 2008ರ ಬ್ಯಾಚಿನ ಅಧಿಕಾರಿಯಾಗಿದ್ದಾರೆ.
4. ಮನೋಜ್ ಜೈನ್ ಅವರನ್ನು, ಅಲ್ಪಸಂಖ್ಯಾತ ಇಲಾಖೆಯ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. 2007ರ ಬ್ಯಾಚಿನ ಅಧಿಕಾರಿಯಾಗಿರುವ ಇವರು, ಯೋಜನೆ ಮತ್ತು ಅಂಕಿಅಂಶ ಇಲಾಖೆಯ (Secretary – Government 2) ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
5. ಡಾ. ತ್ರಿಲೋಕ್ ಚಂದ್ ಜೈನ್ ಅವರನ್ನು, ಯೋಜನೆ ಮತ್ತು ಕಾರ್ಯಕ್ರಮ ಮೇಲ್ವಿಚಾರಣೆ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. 2007ರ ಬ್ಯಾಚಿನ ಅಧಿಕಾರಿಯಾಗಿರುವ ಇವರನ್ನು, ಯಾವ ಇಲಾಖೆಗೂ ಪೋಸ್ಟಿಂಗ್ ಮಾಡಿರಲಿಲ್ಲ.
6. 2010ರ ಬ್ಯಾಚಿನ ಮಂಜುಶ್ರೀ. ಎನ್ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಇದು ಅನ್ವಯವಾಗಲಿದೆ. 7. 2010ರ ಬ್ಯಾಚಿನ ಮಂಜುನಾಥ್.ಜೆ, ತಕ್ಷಣದಿಂದಲೇ ಜಾರಿಗೆ ಬರುವಂತೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸೆಕ್ರೆಟರಿಯಾಗಿ ವರ್ಗಾವಣೆ ಮಾಡಲಾಗಿದೆ. ಇವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು.
8. ಪೂರ್ಣಿಮಾ ಬಿಆರ್ ಅವರನ್ನು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. 2016ರ ಬ್ಯಾಚಿನ ಇವರು, ಶಿವಾನಂದ ಕಾಪಾಸಿ ಅವರ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.















