ಈಗಿನ ದೇವರ ಪೂಜೆಯಲ್ಲಿ ಬರೇ ತಂತ್ರ, ಮಂತ್ರ ಇಲ್ಲ: ವಿದ್ಯಾಧೀಶ ಸ್ವಾಮೀಜಿ

ಉಡುಪಿ: ಇಂದು ದೇವರಿಗೆ ಸಲ್ಲಿಸುವ ಪೂಜೆಯಲ್ಲಿ ತಂತ್ರ ಇದೆಯೇ ಹೊರತು ಮಂತ್ರಗಳಿಲ್ಲ. ಮಂತ್ರ ಇಲ್ಲದಿರುವ ಪೂಜೆಯನ್ನು ದೇವರು ಇಷ್ಟ ಪಡುವುದಿಲ್ಲ. ಹಾಗಾಗಿ
ಮಂತ್ರಘೋಷ್ಯದೊಂದಿಗೆ ದೇವರಿಗೆ ಪೂಜೆ ಮಾಡಬೇಕು ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ವಿದ್ವಾಂಸ ಸೂರ್ಯಪ್ರಕಾಶ ರಾವ್‌ ರಚಿಸಿದ ಶ್ರೌತವಿಷ್ಣುಪೂಜಾವಿಧಿವರ್ಣನಂ
(ತಂತ್ರಸಾರರೀತ್ಯಾ) ಗ್ರಂಥವನ್ನು ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ
ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಯಾವ ಮಂತ್ರದಲ್ಲಿ ದೋಷವಿಲ್ಲ, ಆ ಮಂತ್ರವನ್ನು ಪಠಣ ಮಾಡಿಕೊಂಡು ಭಗವಂತನನ್ನು ಆರಾಧಿಸಬೇಕು. ಆ ಮಾತ್ರ ಭಗವಂತನ ಅನುಗ್ರಹ ಪಡೆಯಲು ಸಾಧ್ಯ. ವೇದ ಎನ್ನುವುದು ಯಾರು ರಚಿಸಿದಲ್ಲ. ಅದು ಅಪೌರುಷ್ಯವಾದುದು. ಹಾಗಾಗಿ ಅದರಲ್ಲಿ ದೋಷವೇ ಇಲ್ಲ. ದೇವರಿಗೆ ವೇದ ಎಂದರೆ ಬಹಳ ಪ್ರಿಯವಾದುದು ಎಂದರು.
ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ ಮಾತನಾಡಿ, ದೇವರ ಪೂಜೆಯಲ್ಲಿ ಭಕ್ತಿಭಾವ ಇರಬೇಕು. ಯಾಂತ್ರಿಕ ರೂಪದಲ್ಲಿ ಪೂಜೆ ಮಾಡಿದರೆ ದೇವರ ಅನುಗ್ರಹ ಸಿಗಲಾರದು ಎಂದು ಹೇಳಿದರು. ದ್ವಾಪರಯುಗದಿಂದಲೂ ದೇವರಿಗೆ ಪೂಜೆ ಮಾಡುವ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗಿದೆ. ಹಾಗಾಗಿ ವರ್ತಮಾನ ಕಾಲದಲ್ಲಿ ದಿನದಲ್ಲಿ ಸ್ವಲ್ಪ ಸಮಯವನ್ನಾದರೂ ದೇವರ ಆರಾಧನೆಗೆ ಮೀಸಲಿಡಬೇಕು. ಪ್ರಸ್ತುತ ವೈದಿಕ ಮಂತ್ರಗಳೊಂದಿಗೆ ಲೌಕಿಕ ಮಂತ್ರಗಳನ್ನು ಮಿಶ್ರಣ ಮಾಡಿಕೊಂಡು ಪೂಜೆ ಮಾಡಲಾಗುತ್ತಿದೆ. ವೇದ ದೇವರನ್ನು ಸ್ತುತಿಸುವ ಗ್ರಂಥ. ವೇದ ಮಂತ್ರಗಳಿಗೆ ಅದರದ್ದೇ ಆದ ಸ್ಥಾನಮಾನಗಳಿವೆ. ಆದರೆ ಈಗ ಮಂತ್ರ ಪಠಿಸುವವರ ಜ್ಞಾನದ ಕೊರತೆಯಿಂದಾಗಿ ಅವರು ಉಚ್ಛರಿಸುವ ಮಂತ್ರಗಳು ಸರಿಯಾಗಿ ಅರ್ಥ ಆಗುವುದಿಲ್ಲ ಎಂದರು.
ಅದಮಾರು ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ ಮಾತನಾಡಿ, ಎಲ್ಲ ಆಚರಣೆ ಮತ್ತು
ಸಂಪ್ರದಾಯಗಳಿಗೆ ವೇದವೇ ಮೂಲ. ಭಗವಂತ ಹೇಗೆ ಅನಾದಿಯೋ, ಹಾಗೆಯೇ ವೇದ ಕೂಡ ಅನಾದಿ ಎಂದು ಹೇಳಿದರು. ಲೇಖಕ ವಿದ್ವಾಂಸ ಸೂರ್ಯಪ್ರಕಾಶ ರಾವ್‌ ಉಪಸ್ಥಿತರಿದ್ದರು.