ಬಿಟ್ಟೆನೆಂದರೂ ಬಿಡದು ಮೊಟ್ಟೆ ಹಣ್ಣಿನ ಮಾಯೆ!: ಆರೋಗ್ಯಕ್ಕೂ ಪೂರಕ ಈ ರುಚಿಕರ ಹಣ್ಣು

ಕೆಲವೊಂದು ಹಣ್ಣುಗಳು ಅಷ್ಟೊಂದು ರುಚಿ ಇಲ್ಲದಿದ್ದರೂ ಮಾರುಕಟ್ಟೆಯ ಬೇಡಿಕೆಯಿಂದಾಗಿಯೋ, ಹಣ್ಣುಗಳ ಅಧಿಕ ಇಳುವರಿಯಿಂದಾಗಿಯೋ ಎಲ್ಲರ ಬಾಯಲ್ಲೂ ಸೆಟ್ಟೇರಿಬಿಡುತ್ತದೆ. ಆದರೆ ಕೆಲವೊಂದು ಹಣ್ಣುಗಳು ಅತ್ಯಂತ ರುಚಿಕರವಾಗಿದ್ದರೂ, ಅದು ಮಾರುಕಟ್ಟೆಯಲ್ಲಿ ಅಷ್ಟೊಂದು ಮುನ್ನೆಲೆಗೂ ಬಾರದೇ, ಇತ್ತ ಬೆಳೆಯುವವರ ಕೈಯನ್ನೂ ಹಿಡಿಯದೇ ಹಣ್ಣಾಗಿ ಕೋತಿಗಳ ಪಾಲಾಗಿ ಬಿಡುತ್ತದೆ. ಇಲ್ಲೊಂದು ಹಣ್ಣಿದೆ. ಇದರ ಹೆಸರು ಮೊಟ್ಟೆ ಹಣ್ಣು. ಅತ್ಯಂತ ಚೇತೋಹಾರಿಯಾದ ರುಚಿಯುಳ್ಳ ಈ ಹಣ್ಣಿನ ಪರಿಸ್ಥಿತಿಯೂ ಅಲ್ಪ ಸ್ವಲ್ಪ ಹೀಗೆಯೇ. ಇಂಗ್ಲೀಷಿನಲ್ಲಿ ಸಾಮಾನ್ಯವಾಗಿ ಎಗ್ ಫ್ರುಟ್ ಎಂದು ಕರೆಯಲ್ಪಡುವ ಈ ಹಣ್ಣಿನ ಮೂಲ ಅಮೇರಿಕಾ.

ಪ್ರೊಟೀನ್ ಮಯ ಹಣ್ಣು:

ಈ ಹಣ್ಣಿನ ಮಧ್ಯ ಭಾಗ ಬೇಯಿಸಿದ ಮೊಟ್ಟೆಯ ಯಾಕ್ ನಂತಿರುವುದರಿಂದ ಇದಕ್ಕೆ ಮೊಟ್ಟೆ ಹಣ್ಣು ಅನ್ನೋ ನಾಮಾಂಕಿತ. ಸೇಬುವಿನಂತ ಆಕಾರ, ಹಣ್ಣಾದ ಕೂಡಲೇ ತಿಳಿ ಹಳದಿ, ನಸು ಕೇಸರಿ ಬಣ್ಣದಿಂದ ತುಂಬಿಕೊಳ್ಳುವ ಮೊಟ್ಟೆ ಹಣ್ಣಿನ ರುಚಿ ಕೂಡ ಅಷ್ಟೇ ಮಧುರ, ಕೋಮಲ ಹಾಗೂ ಸ್ವಾಧಿಷ್ಟಮಯ. ಇದು ಅತ್ಯಂತ ಮೃದು ಸ್ವಭಾವದ ಹಣ್ಣಾಗಿದ್ದು ಕೆಲವೊಮ್ಮೆ ಸಿಪ್ಪೆ ಸಹಿತ ತಿಂದರೂ ಮೂಲ ರುಚಿಗೆ ಧಕ್ಕೆ ಬರದು.

ಸಿಹಿ ಸಿಹಿ ಹಿಟ್ಟನ್ನು ಬಾಯಿಗೆ ಹಾಕಿದರೆ ಯಾವ ಅನುಭವ ಬರುತ್ತದೆಯೋ ಅಂತಹ ರುಚಿ ಇದರದ್ದು. ಬಾಯಿಗೆ ಹೆಚ್ಚು ಕೆಲಸ ಕೊಡುವ ಗುಣವೂ ಇದರದ್ದಲ್ಲ. ಬಾಯಿಗೆ ಹಾಕಿದ ಅರೆಕ್ಷಣದಲ್ಲೇ ನೀರಾಗಿ ಬಿಡುವ ಹಣ್ಣು ಇದು. ಜಾಸ್ತಿ ಸಿಹಿಯೂ ಅಲ್ಲದ್ದರಿಂದ ಮಧುಮೇಹಿಗಳೂ ಮನಸ್ಸು ಮಾಡಿದರೆ ಇದನ್ನು ತಿನ್ನಬಹುದು.

ಮಿಲ್ಕ್ ಶೇಕ್ ಸೂಪರ್:

ಇದರ ಐಸ್ ಕ್ರೀಮ್ ಬಲು ರುಚಿ.ಒಂದೆರಡು ಹಣ್ಣಿಂದ ಜ್ಯೂಸ್ ಮಾಡಿದರಂತೂ ತುಂಬಾ ಟೇಸ್ಟಿ.  ಹೆಚ್ಚಿನ ಪ್ರೋಟೀನ್ ಹಾಗೂ ವಿಟಮೀನ್ ಸಿ.ಯಿಂದ ಸಮೃದ್ದವಾಗಿರುವ ಈ ಹಣ್ಣಿಗೆ ಚರ್ಮದ ಕಾಂತಿಯನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವ ಶಕ್ತಿಯೂ ಇದೆ ಅನ್ನುವುದು ಅಧ್ಯಯನ ಹೇಳಿರುವ ಸತ್ಯ. ಹಾಗಾಗಿ ಮೆಕ್ಸಿಕೋ, ತೈವಾನ್, ಬ್ರೇಜಿಲ್ ದೇಶದಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ.

ಬೆಳವಣಿಗೆ ಹೇಗೆ?
ಮಳೆಗಾಲದಲ್ಲಿ ಇದರ ಬೀಜ ಹಾಕಿದರೆ ಒಂದೆರಡು ತಿಂಗಳುಗಳಲ್ಲೇ ಗಿಡವಾಗಿ ಬೆಳೆಯುತ್ತದೆ. ಆದರೆ ಪಕ್ವವಾಗಿ ಬೆಳೆದು ಸ್ವಾಧಿಷ್ಟ ಹಣ್ಣು ಹುಟ್ಟಬೇಕಾದರೆ ೨.೩೦ ರಿಂದ ೩ ವರ್ಷಗಳಾದರೂ ಬೇಕೇ ಬೇಕು. ಅತೀ ಮಳೆ ಬೀಳದ ಪ್ರದೇಶದಲ್ಲೂ, ಬೇರೆ ಮರಗಳ ನೆರಳಿನಲ್ಲೂ ಎಗ್ ಫ್ರುಟ್ ಗಿಡ ಬೆಳೆಯುತ್ತದೆ. ಅಡಿಕೆ, ತೆಂಗು ಇತ್ಯಾದಿಗಳ ಜೊತೆಗೆ ಉಪಬೆಳೆಯನ್ನಾಗಿಯೂ ಇದನ್ನು ಬೆಳೆಸಬಹುದು.

ಸಾಮಾನ್ಯವಾಗಿ ಅಡಿಕೆ ಮರದ ಸಾಲುಗಳ ನೆರಳಲ್ಲಿ ಕೆಲವೊಂದು ಕಡೆ ಬೆಳೆಸುತ್ತಾರೆ. ಅಂತಹ ಆರೈಕೆಗಳೇನೂ ಇದಕ್ಕೆ ಬೇಕಾಗಿಲ್ಲವಾದರೂ ರಾಸಾಯನಿಕ ಗೊಬ್ಬರಗಳಿಗಿಂತ , ಮನೆಯಲ್ಲೇ ತಯಾರಿಸುವ ಸಾವಯವ ಗೊಬ್ಬರ ಇದರ ಬೆಳವಣಿಗೆಗೆ ಪೂರಕ. ೨೦ ರಿಂದ ೩೩ ಅಡಿ ಎತ್ತರ ಬೆಳೆಯುವ ಇದರ ಎಲೆಗಳು ಥೇಟ್ ಮಾವಿನ ಎಲೆಗಳನ್ನೇ ಹೋಲುತ್ತದೆ. ಏಪ್ರಿಲ್ ಮೇ ತಿಂಗಳಲ್ಲಿ ಧಾಳಾಗಿ ಹೂ ಬಿಟ್ಟು ಬೇಸಿಗೆ ಕಳೆದು ಮೊದಲ ಮಳೆ ಬೀಳುವ ಹೊತ್ತಿಗೆ ಗೊಂಚಲು ಗೊಂಚಲು ಮೊಟ್ಟೆ ಹಣ್ಣುಗಳು ಗೆಲ್ಲುಗಳಲ್ಲಿ ತೂಗುತ್ತದೆ. 

ಬೇಡಿಕೆ ಹೇಗೆ?
ಭಾರತದಲ್ಲಿ ಮೊಟ್ಟೆ ಹಣ್ಣಿಗೆ ಅಷ್ಟೊಂದು ಜನಪ್ರಿಯತೆ ಏನೂ ಇಲ್ಲ. ಹೆಚ್ಚಿನ ಕೃಷಿಕರಿಗೆ ಇದರ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಕೆಲವೊಂದು ಮಾರುಕಟ್ಟೆಯಲ್ಲಿ ಎಗ್ ಫ್ರುಟ್ ಲಭ್ಯವಿದ್ದರೂ ಇದಕ್ಕೆ ಅಂತಹ ಬೇಡಿಕೆ ಏನೂ ಇಲ್ಲ ಅನ್ನೋದು ಸತ್ಯ. ಕೆಲವರು ಬೆಳೆದರೂ ಅದು ಪನ್ನೇರಳೆ ಹಣ್ಣುಗಳಂತೆ ಉದುರಿ ಮಣ್ಣು ಸೇರಿ ಬಿಡುತ್ತದೆ. ಆದರೆ ನೆನೆಪಿರಲಿ, ಮೊಟ್ಟೆ ಹಣ್ಣು ಇನ್ನೇನು ಎಲ್ಲರ ಬಾಯಲ್ಲೂ ಇಳಿಯಲು ತವಕಿಸುತ್ತಿದೆ.

ಯುರೋಪ್ ದೇಶಗಳಲ್ಲಿ ಎಗ್ ಫ್ರುಟ್ ಜ್ಯೂಸ್, ಜಾಮ್, ಪೇಯ, ಕೇಕ್ ಇತ್ಯಾದಿಗಳಿಗೆ ಭಾರೀ ಬೇಡಿಕೆ ಇದೆ. ನಮ್ಮಲ್ಲೂ ಇದರ ಜ್ಯೂಸ್, ಐಸ್ ಕ್ರೀಮ್ ಇತ್ಯಾದಿಗಳ ಪ್ರಯೋಗವಾಗುತ್ತಿದ್ದರೂ, ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲವಾಗಿದೆ. ಒಂದಂತೂ ಸತ್ಯ. ಎಗ್ ಫ್ರುಟ್ ಉತ್ಪನ್ನಗಳನ್ನು ತಯಾರಿಸಿ, ಉತ್ತಮವಾದ ಮಾರುಕಟ್ಟೆ ಕಂಡುಕೊಂಡು, ಈ ಅಪರೂಪದ ಹಣ್ಣಿಗೂ ಅಮೋಘವಾದ ರುಚಿ ಇದೆ ಎನ್ನುವುದನ್ನು ತೋರಿಸಿಕೊಟ್ಟರೆ, ಈ ಮೊಟ್ಟೆ ಹಣ್ಣು ಒಳ್ಳೆಯ ಲಾಭದಾಯಕ ಹಣ್ಣಾಗಿ ಪರಿಣಮಿಸುವುದು ಖಂಡಿತ. 

-ಪ್ರಸಾದ್ ಶೆಣೈ