ಮಂಗಳೂರು: ಸಣ್ಣ ಅವಕಾಶದಿಂದ ಆಗಸದಷ್ಟು ಸಾಧಿಸಬಹುದು, ಅವಕಾಶವನ್ನುಅರಿಯುವ ಶಕ್ತಿ ನಮ್ಮಲ್ಲಿರಬೇಕು. ಅವಕಾಶಗಳು ಒದಗಿ ಬಂದಾಗ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದುಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ನಿರ್ದೇಶಕ ಅಂಕುಶ್ಎನ್. ನಾಯಕ್ ಹೇಳಿದರು.
ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿವಿಧ ಮಾರ್ಗಗಳು ಮತ್ತು ತಂತ್ರಗಳ ಕುರಿತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು, ಮಂಗಳೂರು ಇವರ ಆಶ್ರಯದಲ್ಲಿ ಕೂಟಕ್ಕಳ ಸಭಾಂಗಣದಲ್ಲಿ ಹಮ್ಮಿಕೊಂಡ “ವೃತ್ತಿ ಮಾರ್ಗದರ್ಶನ ಎಜುಪಾತ್- 2022” ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಾವು ಯಾವುದೇ ಕ್ಷೇತ್ರದಲ್ಲಿ ಮುಂದುವರೆದರೂ ಕೂಡ ಕಠಿಣ ಪರಿಶ್ರಮ ಮತ್ತು ವಿನಮ್ರತೆಯನ್ನು ರೂಢಿಸಿಕೊಳ್ಳಬೇಕು. ಅದರೊಂದಿಗೆ ಇಂದಿನ ಆಧುನಿಕಯುಗದಲ್ಲಿನಮ್ಮ ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುವುದು ಅನಿವಾರ್ಯ ಎಂದರು.
ವೃತ್ತಿ ಮಾರ್ಗದರ್ಶನ ಎಜುಪಾತ್ ಸರಣಿಯ ಮೊದಲ ಅಧಿವೇಶನವನ್ನುಉದ್ದೇಶಿಸಿ ಮಾತನಾಡಿದ ರಾಮಕೃಷ್ಣ ಪದವಿ ಪೂರ್ವಕಾಲೇಜು, ಮಂಗಳೂರಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಹರೀಶ್ ಭಟ್, ಎಲ್ಲಾ ವಿಷಯಗಳಿಗೆ ನಿಗದಿತ ಸಮಯವನ್ನು ಬಳಸಿಕೊಂಡು ಕಠಿಣ ಪರಿಶ್ರಮ ಪಟ್ಟುಅತಿ ಹೆಚ್ಚು ಅಂಕ ಪಡೆಯಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದ ಅವರು ಸಿ.ಇ.ಟಿ. ಪರೀಕ್ಷೆ ಮತ್ತುಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅತ್ಯಮೂಲ್ಯ ಸಲಹೆಗಳನ್ನು ನೀಡಿದರು.
ಸರಣಿಯ ಎರಡನೇ ಅಧಿವೇಶನವನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎನ್ಐಟಿಕೆ ಸುರತ್ಕಲ್ನ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್ನ ಮುಖ್ಯಸ್ಥ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ನ ಪ್ರೊಫೆಸರ್ ಡಾ.ಕೆ.ವಿ. ಗಂಗಾಧರನ್ “ಎಂಜಿನಿಯರಿಂಗ್ ನಮ್ಮ ಭವಿಷ್ಯ” ಎಂಬ ವಿಷಯದ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದು ಎಂಜಿನಿಯರಿಂಗ್ ತಂತ್ರಜ್ಞರ ಅವಶ್ಯಕತೆ ಇಲ್ಲದ ಕ್ಷೇತ್ರಗಳೇ ಇಲ್ಲ ,ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂದು ಎಲ್ಲಿಲ್ಲದ ಅವಕಾಶವಿದೆ. ವೈಮಾನಿಕ ,ಕೈಗಾರಿಕಾ, ಕೃಷಿ ,ಆಹಾರ ಸಂಸ್ಕರಣೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ದೃಢತೆ, ನಿರಂತರ ಅಭ್ಯಾಸ ,ಕಠಿಣ ಪರಿಶ್ರಮ ಪಟ್ಟುಉತ್ತಮ ಇಂಜಿನಿಯರ್ಗಳಾಗಿ ದೇಶಕ್ಕೆ ಕೊಡುಗೆ ನೀಡಬೇಕು ಎಂದರು.
ಸರಣಿಯ ಮೂರನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರೊ.ಪ್ರಶಾಂತ್ ಆರ್. ಸಹಾಯ್ ಪರೀಕ್ಷೆಯ ತಯಾರಿ ಮತ್ತು ವಿದ್ಯಾರ್ಥಿಗಳು ಕರಗತ ಮಾಡಿಕೊಳ್ಳಬೇಕಾದ ಕಲೆಯ ಕುರಿತು, ಜೆ.ಇ.ಇ.ನೀಟ್ ಮತ್ತುಇತರ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಸರಣಿಯ ನಾಲ್ಕನೆಯ ಅಧಿವೇಶನದಲ್ಲಿ ಕೆ.ಎಂ.ಸಿ. ಆಸ್ಪತ್ರೆಯ ಕ್ಲಿನಿಕಲ್ ಇಮ್ಯುನಾಲಜಿ ಮತ್ತು ರುಮಟಾಲಜಿ ವಿಭಾಗದ ಕನ್ಸಲ್ಟಂಟ್ ಇಮ್ಯುನೋಲಜಿಸ್ಟ್, ಸಂಧಿವಾತ ಶಾಸ್ತ್ರಜ್ಞ ಡಾ.ಸಜ್ಜನ್ ಶೆಣೈ ಎನ್, ವೈದ್ಯಕೀಯ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳಬೇಕಾದರೆ ಜೀವಶಾಸ್ತ್ರ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಇರಬೇಕು ಮತ್ತುಈ ಕ್ಷೇತ್ರದಲ್ಲಿ ಮುಂದುವರಿಯಲು ಸತತ ಪ್ರಯತ್ನದ ಅಗತ್ಯವಿದೆ. ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವವರು ತಮಗೆ ಬೇಕಾದ ಕಾಲೇಜುಗಳನ್ನು ಆಯ್ಕೆಮಾಡಿಕೊಳ್ಳುವಾಗ ಅಲ್ಲಿನ ಶುಲ್ಕ ಪಾವತಿಯ ಬಗ್ಗೆ, ವಿವಿಧ ಕೋರ್ಸ್ ಗಳ ಬಗ್ಗೆ ಸರಿಯಾದ ಮಾಹಿತಿಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದ ಅವರು ವಿದ್ಯಾರ್ಥಿಗಳಿಗೆ ಈ ಬಗ್ಗೆ ಸೂಕ್ತವಾದ ಮಾಹಿತಿಗಳನ್ನು ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಸಂಪನ್ಮೂಲವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು. ಪ್ರಾಂಶುಪಾಲ ಪ್ರೊ.ರಾಮಚಂದ್ರಭಟ್ ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕಾಲೇಜಿನ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.
ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿಯರಾದ ಗೌರಿ.ಜಿ.ಮೆನನ್ ಮತ್ತು ಸಾತ್ವಿಕ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಉಜ್ವಲ್ ಪ್ರದೀಪ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.