ಸುಡು ಮದ್ದು, ಬೆಂಕಿ, ಹೊಗೆ ಯಾವುದೂ ಇಲ್ಲದ ಪರಿಸರಕ್ಕೆ ಎಳ್ಳಷ್ಟೂ ಹಾನಿಮಾಡದ ಬಿದಿರಿನ ಪಟಾಕಿ

ಕಾರವಾರ: ಮೂಲತಃ ಶಿರಸಿಯವರಾಗಿರುವ ಪಾಂಡುರಂಗ ಭಟ್ ರವರ ಈ ವಿಶಿಷ್ಟ ಬಿದಿರಿನ ಪಟಾಕಿಯಲ್ಲಿ ಸುಡು ಮದ್ದು, ಬೆಂಕಿ, ಹೊಗೆ ಯಾವುದೂ ಇಲ್ಲದ ಕಾರಣ ಪರಿಸರಕ್ಕೆ ಎಳ್ಳಷ್ಟೂ ಹಾನಿಯಾಗುವುದಿಲ್ಲ. ಬರೇ ನಾಲ್ಕು ಗಂಟಿನ ಬಿದಿರು ತಂದು ಅದರ ನಡುವಿನ ಗಂಟುಗಳನ್ನೆಲ್ಲ ತೆಗೆದು ಒಂದು ಗಂಟಿನ ಬುಡದಲ್ಲಿ ಒಂದೂವರೆಯಿಂದ ಎರಡು ಇಂಚು ದೂರದಲ್ಲಿ 16 ಮಿ.ಮೀ ರಂಧ್ರವನ್ನು ಮಾಡಿ, ಅದರಲ್ಲಿ 50 ರಿಂದ 60 ಮಿ.ಲೀ ನಷ್ಟು ಸೀಮೆ ಎಣ್ಣೆ ತುಂಬಿ 75 ಡಿಗ್ರಿ ಕೋನದಲ್ಲಿ ಹಿಡಿದು ಆ ಬಳಿಕ ಕಡ್ಡಿಯಿಂದ ಬುಡದಲ್ಲಿರುವ ರಂಧ್ರಕ್ಕೆ ಬೆಂಕಿ ತಾಗಿಸಿದರೆ ಸಾಕು… ಢಾಂ… ಢಾಂ… ಗರ್ನಲ್ ಅನ್ನೂ ಮೀರಿಸುವ ಪಟಾಕಿ ಸದ್ದು ತಯಾರು.

ಈ ಪರಿಸರ ಸ್ನೇಹೀ ಬಿದಿರಿನ ಪಟಾಕಿಯನ್ನು ತಯಾರಿಸಲು ಯಾವುದೇ ಖರ್ಚಿಲ್ಲ, ಪರಿಸರ ಮಾಲಿನ್ಯವಂತೂ ಇಲ್ಲವೇ ಇಲ್ಲ. ಮತ್ತೆ ಮತ್ತೆ ಉಪಯೋಗಿಸಬಹುದಾದ ಬಿದಿರಿನ ಪಟಾಕಿಯಿಂದ ಬೆಳೆಗಳಿಗೆ ಹಾನಿ ಮಾಡಲು ಬರುವ ಪ್ರಾಣಿ ಪಕ್ಷಿಗಳನ್ನೂ ಓಡಿಸಬಹುದು. ಬಹುಪಯೋಗೀ ಬಿದಿರಿನ ಪಟಾಕಿಯಿಂದ 70-80 ಬಾರಿ ಸದ್ದು ಸಿಡಿಸಬಹುದು.

ದೀಪಾವಳಿ ಹಬ್ಬಕ್ಕೂ ಸೈ, ಪ್ರಾಣಿ ಓಡಿಸುವುದಕ್ಕೂ ಸೈ ಎನಿಸಿರುವ ಈ ಬಿದಿರಿನ ಪಟಾಕಿಯನ್ನು ತಯಾರಿಸುವವರು ಪಾಂಡುರಂಗ ಭಟ್. ಬಿದಿರಿನ ಪಟಾಕಿ ಬೇಕೆನ್ನುವವರು ಇವರನ್ನು 97418 10502 ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ಕೃಪೆ: ನ್ಯೂಸ್18 ಕನ್ನಡ